ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ 20 ವರ್ಷದ ಅಮೂಲ್ಯ ಲಿಯೋನಾ ತಾನು ತಪ್ಪೇ ಮಾಡಿಲ್ಲ ಎಂಬ ಮನಸ್ಥಿತಿಯಲ್ಲಿ ಇದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಮಧ್ಯರಾತ್ರಿ ಜೈಲು ಸೇರಿರುವ ಅಮೂಲ್ಯ ಎಂದಿನಂತೆ ಜೈಲೂಟ ಸೇವಿಸಿದ್ದಾಳೆ. ಸದ್ಯ ಮಹಿಳಾ ವಿಚಾರಣಾ ಕೈದಿಯ ಬಿ-2 ಬ್ಯಾರಕ್ನಲ್ಲಿ ಅಮೂಲ್ಯಳನ್ನು ಇರಿಸಲಾಗಿದೆ. ಗುರುವಾರ ಫ್ರೀಡಂಪಾರ್ಕ್ನಲ್ಲಿ ನಡೆದ ಸಿಎಎ ಹಾಗೂ ಎನ್ಸಿಆರ್ ವಿರುದ್ಧದ ಸಮಾವೇಶದಲ್ಲಿ ಪಾಕ್ ಪರ ಮೂರು ಬಾರಿ ಜಿಂದಾಬಾದ್ ಎಂದು ಕೂಗಿದ್ದಳು.
ಆಕೆಯನ್ನು ವಶಕ್ಕೆ ಪಡೆದುಕೊಂಡ ಉಪ್ಪಾರಪೇಟೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ರಾತ್ರೋರಾತ್ರಿ ಜಡ್ಜ್ ಮನೆಗೆ ಕರೆದೊಯ್ದಿದ್ದರು. ಬಳಿಕ ನ್ಯಾಯಾಧೀಶರ ಆದೇಶದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
ಸೆರೆಮನೆಯಲ್ಲಿರುವ ಅಮೂಲ್ಯಳಿಗೆ ತಾನು ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪವೇ ಉಂಟಾಗಿಲ್ಲವಂತೆ. ಇತರೆ ಸಹ ಕೈದಿಗಳೊಡನೆ ಇದ್ದರೂ ಆಕೆಯ ವರ್ತನೆಯಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ ಎನ್ನಲಾಗ್ತಿದ್ದು, ದೇಶದ್ರೋಹ ಹೇಳಿಕೆ ಬಗ್ಗೆ ಜೈಲಾಧಿಕಾರಿಗಳು ಪ್ರಶ್ನಿಸಿದರೆ ತಾನು ತಪ್ಪು ಮಾಡಿಲ್ಲ ಎಂದು ಉತ್ತರಿಸಿದ್ದಾಳಂತೆ.