ಬೆಂಗಳೂರು:ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತಳಾಗಿರುವ ಅಮೂಲ್ಯ ಲಿಯೋನ್, ವಿಚಾರಣೆ ವೇಳೆ ಬಹಳಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದು, ಈಕೆ ಗೌರಿ ಲಂಕೇಶ್ ಅವರಿಂದ ಪ್ರೇರಿತಳಾಗಿ ತನ್ನ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.
ಗೌರಿಲಂಕೇಶ್ ಹತ್ಯೆ ನಂತರ "ಪ್ಯೂಚರ್ ಗೌರಿ" ಎಂದು ಖ್ಯಾತಿ ಪಡೆದಿದ್ದ ಅಮೂಲ್ಯ, ಗೌರಿ ಲಂಕೇಶ್ ಅವರ ಬರಹ ಹಾಗೂ ಭಾಷಣಗಳಿಂದ ಪ್ರಭಾವಿತಳಾಗಿ ಗೌರಿ ಲಂಕೇಶ್ ಅವರಂತೆ ಹೇರ್ ಸ್ಟೈಲ್ ಬದಲಿಸಿಕೊಂಡಿರುವ ವಿಚಾರ ಬಾಯಿ ಬಿಟ್ಟಿದ್ದಾಳೆ. ಹಾಗೆಯೇ ಗೌರಿ ಹತ್ಯೆ ನಂತರ ಹತ್ತು ಮಂದಿಯನ್ನ ಪ್ಯೂಚರ್ ಗೌರಿ ಅಂತ ಕರೆಯಲಾಗುತ್ತಿತ್ತು, ಹತ್ತು ಮಂದಿಯ ಪೈಕಿ ಅಮೂಲ್ಯ ಮುಂಚೂಣಿಯಲ್ಲಿದ್ದಳಂತೆ.
ಸದ್ಯ ಅಮೂಲ್ಯ ವಶದಲ್ಲಿದ್ದು ಉಳಿದ 9 ಮಂದಿ ಯಾರು? ಈಕೆಯನ್ನು ಯಾಕೆ ಪ್ಯೂಚರ್ ಗೌರಿ ಅಂತ ಕರೆಯಲಾಗುತ್ತಿತ್ತು. ಉಳಿದವರನ್ನ ವಿಚಾರಣೆ ನಡೆಸಬೇಕಾ? ಅಮೂಲ್ಯಳಿಗೂ ಅವರಿಗೂ ಇರುವ ಸಂಬಂಧವೇನು? ಬೆಂಗಳೂರಲ್ಲಿ ಪಾಕ್ ಪರ ಘೋಷಣೆಯಲ್ಲಿ ಉಳಿದವರ ಪಾತ್ರ ಇದೆಯಾ? ಎಂಬುದನ್ನೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಮೂಲ್ಯಳಿಗೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು ಸದ್ಯ ಎಸ್.ಐ.ಟಿ ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಯನ್ನ ಅಮೂಲ್ಯ ಬಾಯಿ ಬಿಟ್ಟಿದ್ದಾಳೆ.
ಪೊಲೀಸ್ ಕಸ್ಟಡಿ ಇಂದು ಮುಕ್ತಾಯ:
ಅಮೂಲ್ಯಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದ್ದು ಇಂದು ಆಕೆಯನ್ನ ಪೊಲೀಸರು ತೀವ್ರ ವಿಚಾರಣೆಗೆ ಗುರಿ ಪಡಿಸಲಿದ್ದಾರೆ.
ಕಳೆದ ಮೂರು ದಿನಗಳಿಂದ ಅಮೂಲ್ಯಳನ್ನ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಹಲವಾರು ಮಾಹಿತಿ ಕಲೆಹಾಕಿದೆ. ಮತ್ತೊಂದೆಡೆ ಬಿಗಿ ಭದ್ರತೆಯೊಂದಿಗೆ ಇಂದು ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿದ್ದಾರೆ. ಸದ್ಯ ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆ, ಮತ್ತೆ ಪೊಲೀಸ್ ಕಸ್ಟಡಿ ತೆಗೆದುಕೊಳ್ಳುವುದು ಅನುಮಾನ ಎಂದು ತಿಳಿದು ಬಂದಿದೆ.