ಬೆಂಗಳೂರು:ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ನಿಮಿತ್ತ ಮುಂದಿನ ತಿಂಗಳು ನಡೆಯಲಿರುವ ಸ್ವಾತಂತ್ರ್ಯ ನಡಿಗೆ, ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆ, ಬಲವರ್ಧನೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಮಹತ್ವದ ಸಭೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪಕ್ಷದ ಪದಾಧಿಕಾರಿಗಳು, ಮುಖಂಡರ ಸಮಾಲೋಚನೆ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಪಥಸಂಚಲನ ನಡೆಸಲು ತೀರ್ಮಾನ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೃಹತ್ ಪಾದಯಾತ್ರೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲು ಸಭೆಯಲ್ಲಿ ಚರ್ಚೆ ಮಾಡಲಾಯಿತು. ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಎಐಸಿಸಿ ಎಲ್ಲ ರಾಜ್ಯಗಳ ಪಿಸಿಸಿಗೆ ಸೂಚನೆ ನೀಡಿದೆ. ಎಐಸಿಸಿ ಸೂಚನೆಯಂತೆ ರಾಜ್ಯದಲ್ಲೂ ವಿನೂತನ ಕಾರ್ಯಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ದಂಡಿ ಸತ್ಯಾಗ್ರಹದ ಮಾದರಿಯಲ್ಲಿ ಪಾದಯಾತ್ರೆ ನಡೆಸಿ ಒಂದು ಲಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ಪಥಸಂಚಲನ ನಡೆಸಲು ತೀರ್ಮಾನಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಬಿಜೆಪಿಯಿಂದ ಎಸಿಬಿ ದುರ್ಬಳಕೆ: ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್ ವರಗೆ ರ್ಯಾಲಿಗೆ ಚಿಂತನೆ ಮಾಡಿದ್ದು, ಶ್ವೇತವರ್ಣ ಬಟ್ಟೆಯಲ್ಲಿ ಪಥ ಸಂಚಲನ ನಡೆಯಲಿದೆ. ಸಭೆಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಜಮೀರ್ ವಿರುದ್ಧ ಎಸಿಬಿ ದುರ್ಬಳಕೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಒಂದೊಂದು ನ್ಯಾಯವಿದೆ. ನಮಗೊಂದು, ಬಿಜೆಪಿಯವರಿಗೊಂದು ಕಾನೂನಿದೆ. ಸ್ಪೀಕರ್ ಅನುಮತಿಯಿಲ್ಲದೇ ದಾಳಿ ಮಾಡಲಾಗಿದೆ. ಎಸಿಬಿಯನ್ನ ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದೊಂದೇ ಅಲ್ಲ ಎಲ್ಲ ಸ್ವಾಯತ್ತ ಸಂಸ್ಥೆ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:'ನಮ್ಮ ಸರ್ಕಾರದಲ್ಲಿ ಅಕ್ರಮವಾಗಿದ್ದರೆ ಪ್ರತಿಪಕ್ಷ ಬಿಜೆಪಿ ಯಾಕೆ ಸುಮ್ಮನೆ ಕುಳಿತಿತ್ತು?'