ಬೆಂಗಳೂರು:ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಗೆ ಸರ್ಕಾರ ಮುಕ್ತ ಅವಕಾಶ ನೀಡಿದ್ದರಿಂದಾಗಿ ಅಕ್ರಮ ಆರೋಪ ಸಂಬಂಧ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನೂ ಬಂಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಐಡಿಗೆ ಸರ್ಕಾರ ಮುಕ್ತವಾದ ಅವಕಾಶ ನೀಡಿದೆ. ಹೀಗಾಗಿ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಾನು ಈ ಮೊದಲೇ ಹೇಳಿದ್ದೆ. ನಮ್ಮ ಸರ್ಕಾರವಾಗಿರುವ ಕಾರಣ ಎಡಿಜಿಪಿ ಹುದ್ದೆಯಲ್ಲಿನ ಹಿರಿಯ ಅಧಿಕಾರಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಎಡಿಜಿಪಿ ಬಂಧನದಿಂದ ಸರ್ಕಾರಕ್ಕೆ ಮುಜುಗರವಾಗುವ ಪ್ರಶ್ನೆ ಉದ್ಭವವಾಗುವುದಿಲ್ಲ. ತನಿಖೆ ಮಾಡಿಸಿದ್ದೇ ನಾವು, ಅದೇ ಬೇರೆ ಸರ್ಕಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಈ ಹಿಂದೆ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿಬಂದಾಗ ಯಾವುದೇ ತನಿಖೆ ಆಗಿರಲಿಲ್ಲ. ಆದರೆ ನಾವು ನಿಷ್ಪಕ್ಷಪಾತವಾಗಿ, ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸುತ್ತಿದ್ದೇವೆ. ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಸಿಎಂ ಖಡಕ್ ಸಂದೇಶ ರವಾನಿಸಿದರು.