ಬೆಂಗಳೂರು:ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿ ಆರೋಪಿ, ಅಧಿಕಾರಿ ಅಮೃತ್ ಪಾಲ್ ಇದ್ದಾರೆ. ಅವರಿಂದ ಜಪ್ತಿ ಮಾಡಿಕೊಂಡಿರುವ ಮೊಬೈಲ್ನಲ್ಲಿನ ದತ್ತಾಂಶ ಸಂಗ್ರಹ ಕಾರ್ಯದಲ್ಲಿ ಸಿಐಡಿ ತೊಡಗಿಸಿಕೊಂಡಿದ್ದು, ಡಿಜಿಟಲ್ ಎವಿಡೆನ್ಸ್ ಕಲೆ ಹಾಕುವಲ್ಲಿ ನಿರತವಾಗಿದೆ. ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಪಾಲ್ರನ್ನ ಇಂದು ಸಹ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಅಕ್ರಮ ಎಸಗಲು ಆಭ್ಯರ್ಥಿ ಹಾಗೂ ಮಧ್ಯವರ್ತಿಗಳು ಪಾಲ್ ಅವರ ಅಣತಿಯಂತೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ಜಪ್ತಿ ಮಾಡಿಕೊಂಡಿದ್ದ ವೇಳೆ ಆರೋಪಿಯು ಮೊಬೈಲ್ನಲ್ಲಿರುವ ಸಾಕ್ಷ್ಯಾಧಾರ ನಾಶಪಡಿಸಿದ್ದರು ಎನ್ನಲಾಗಿದೆ.
ರಿಟ್ರೈವ್ಗಾಗಿ ಮೊಬೈಲ್ ಎಫ್ಎಸ್ಎಲ್ಗೆ ಕಳುಹಿಸಿದ್ದರು. ಆ ವರದಿ ಬಂದಿದ್ದು, ಇದರ ಆಧಾರದ ಮೇರೆಗೆ ಅಳಿಸಿ ಹಾಕಲಾಗಿರುವ ದತ್ತಾಂಶಗಳ ಬಗ್ಗೆ ಕಲೆ ಹಾಕುವಲ್ಲಿ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.