ಬಿಎಸ್ವೈ ನಿವಾಸಕ್ಕೆ ಅಮಿತ್ ಶಾ ಭೇಟಿ ಬೆಂಗಳೂರು:ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದು ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಸೇವಿಸಿದರು. ಇದಕ್ಕೂ ಮುನ್ನ ಅಮಿತ್ ಶಾ ಅವರನ್ನು ಸ್ವಾಗತಿಸಲು ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರ ಅವರು ಹೂಗುಚ್ಛ ಹಿಡಿದು ನಿಂತಿದ್ದರು. ಅಮಿತ್ ಶಾ ಅವರು ಯಡಿಯೂರಪ್ಪ ಬದಲಿಗೆ ವಿಜಯೇಂದ್ರರಿಂದಲೇ ಮೊದಲಿಗೆ ಹೂಗುಚ್ಛ ಸ್ವೀಕರಿಸಿದ್ದು ಕುತೂಹಲಕ್ಕೆ ಕಾರಣವಾಯಿತು.
ಬಿಎಸ್ವೈ ಆಹ್ವಾನದ ಮೇರೆಗೆ ನಿವಾಸಕ್ಕೆ ಆಗಮಿಸಿದ್ದ ಬಿಜೆಪಿ ಚಾಣಕ್ಯ ದೋಸೆ, ಇಡ್ಲಿ, ಪೊಂಗಲ್ ಸವಿದರು. ಕಳೆದ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಶಾ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಉಪಹಾರ ಸೇವನೆಯಲ್ಲಿ ಅಮಿತ್ ಶಾ ಉಪಹಾರಕ್ಕೆ ಆಗಮಿಸುವಂತೆ ಬಿಎಸ್ವೈ ಮಾಡಿದ್ದ ಕೋರಿಕೆಯ ಮೇರೆಗೆ 9.30ಕ್ಕೆ ಅಮಿತ್ ಶಾ ಕುಮಾರ ಪಾರ್ಕ್ನಲ್ಲಿರುವ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗಿದ್ದರು. ಬಿಎಸ್ವೈ ಕುಟುಂಬದ ಸದಸ್ಯರಿಂದ ಉಪಹಾರದ ಆತಿಥ್ಯ ನಡೆಯಿತು. ಬಿಎಸ್ವೈ ಪುತ್ರಿಯರಾದ ಉಮಾದೇವಿ, ಪದ್ಮಾವತಿ ಅತಿಥಿಗಳನ್ನು ಸತ್ಕರಿಸಿದರು.
ವಿಜಯೇಂದ್ರಗೆ ರಾಜಕೀಯ ಶಕ್ತಿ:ಅಮಿತ್ ಶಾ ಅವರು ವಿಜಯೇಂದ್ರ ವಿಚಾರದಲ್ಲಿ ನಡೆದುಕೊಂಡ ರೀತಿ ವಿಜಯೇಂದ್ರರ ರಾಜಕೀಯ ಬೆಳವಣಿಗೆಗೆ ಇದ್ದ ಅಡ್ಡಿಗಳನ್ನು ದೂರ ಮಾಡುತ್ತದೆ ಎನ್ನಲಾಗಿದೆ. ಉಪ ಚುನಾವಣಾ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದು, ಯುವ ಮೋರ್ಚಾದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ರಾಜ್ಯ ಘಟಕಕ್ಕೆ ಬಡ್ತಿ ಪಡೆದಿದ್ದರೂ ವಿಜಯೇಂದ್ರ ರಾಜಕೀಯವಾಗಿ ಬೆಳೆಯಲು ಪದೇ ಪದೇ ಅಡ್ಡಿಪಡಿಸುವ ಸನ್ನಿವೇಶಗಳು ನಿರ್ಮಾಣವಾಗುತ್ತಲೇ ಇವೆ. ಇದೀಗ ಇಂತಹ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ ಎನ್ನಲಾಗುತ್ತಿದೆ.
ಉಪಹಾರ ಸೇವನೆಯಲ್ಲಿ ಅಮಿತ್ ಶಾ ಬಿಎಸ್ವೈ ಸಮ್ಮುಖದಲ್ಲಿಯೇ ಅಮಿತ್ ಶಾ ಅವರು ಯಡಿಯೂರಪ್ಪಗಿಂತ ಹೆಚ್ಚಿನ ಆದ್ಯತೆಯನ್ನ ಅವರ ಪುತ್ರನಿಗೆ ನೀಡುವ ಮೂಲಕ ಪಕ್ಷದಲ್ಲಿ ವಿಜಯೇಂದ್ರ ಬೆಳವಣಿಗೆಗೆ ಪೂರಕ ವಾತಾರಣ ಸೃಷ್ಟಿಸುವ ಸುಳಿವು ನೀಡಿದ್ದಾರೆ. ಅಮಿತ್ ಶಾ ಅವರೇ ವಿಜಯೆಂದ್ರ ಪರ ನಿಂತರೆ ಅವರನ್ನು ವಿರೋಧಿಸುವ ಧೈರ್ಯವನ್ನು ಯಾರೂ ತೋರುವುದಿಲ್ಲ. ಹಾಗಾಗಿ ವಿಜಯೇಂದ್ರ ರಾಜಕೀಯ ಬೆಳವಣಿಗೆಗೆ ಇಂದಿನ ವಿದ್ಯಮಾನ ಬಹಳ ಮಹತ್ವದ್ದಾಗಿದೆ.
ಈ ಕುರಿತು ಮಾತನಾಡಿರುವ ವಿಜಯೇಂದ್ರ,ಅಮಿತ್ ಶಾ ಬೆನ್ನುತಟ್ಟಿ ಮಾತನಾಡಿಸಿದ್ದು ನನಗೆ ಆನೆ ಬಲ ಬಂದಂತಾಗಿದೆ ಎಂದರು. ಇದು ರಾಜಕೀಯ ಸಂದೇಶವೇ ಎನ್ನುವ ಪ್ರಶ್ನೆಗೆ ಇದು ಸಹಜ ಎನ್ನುವ ಮೂಲಕ ಪಕ್ಷದಲ್ಲಿರುವ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.
ಅಮಿತ್ ಶಾ ಕಾರ್ಯಕ್ರಮಗಳು:ಒಂದು ದಿನದ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಅಮಿತ್ ಶಾ, ಬೆಂಗಳೂರಿನಲ್ಲಿ ಇಂದು ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಗೃಹ ಇಲಾಖೆ ಹಾಗೂ ಕೇಂದ್ರದ ಸಹಕಾರ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವರು. ಬೆಳಗ್ಗೆ 10ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಮಾದಕ ದ್ರವ್ಯಗಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಪಕ್ಷದ ನಾಯಕರೊಂದಿಗೆ ಅಮಿತ್ ಶಾ ಚರ್ಚೆ ಸಹಕಾರ ಸಮೃದ್ಧಿ ಸೌಧದ ಶಂಕುಸ್ಥಾಪನೆ: ಮಧ್ಯಾಹ್ನ 2ಕ್ಕೆ ಕೊಮ್ಮಘಟ್ಟದಲ್ಲಿ ನಡೆಯುವ ಎರಡನೇ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಕೊಮ್ಮಘಟ್ಟದಲ್ಲಿ ಸಹಕಾರ ಸಮೃದ್ಧಿ ಸೌಧದ ಶಂಕುಸ್ಥಾಪನೆ ನೆರವೇರಿಸಲಿದ್ದು, ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮ ಮುಗಿಸಿ ಇಂದು ಮಧ್ಯಾಹ್ನ 3.30ಕ್ಕೆ ದೆಹಲಿಗೆ ವಾಪಸ್ ತೆರಳಲಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಸಮೀಪ 2 ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ ನಗರಿ: ಮುಖ್ಯಮಂತ್ರಿ ಬೊಮ್ಮಾಯಿ