ಕರ್ನಾಟಕ

karnataka

ETV Bharat / state

ನಾಳೆ ಬಸವ ಕಲ್ಯಾಣ, ದೇವನಹಳ್ಳಿಯಲ್ಲಿ ಬಿಜೆಪಿ ರಥಯಾತ್ರೆಗೆ ಚಾಲನೆ: ಇಂದು ರಾತ್ರಿಯೇ ರಾಜ್ಯಕ್ಕೆ ಶಾ ಆಗಮನ - BJP Vijaya Sankalpa yathre

ಬಿಜೆಪಿಯ ಮೊದಲ ರಥಯಾತ್ರೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಚಾಲನೆ ನೀಡಿದ್ದರು.

BJP Vijaya Sankalpa yathre
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

By

Published : Mar 2, 2023, 4:13 PM IST

ಬೆಂಗಳೂರು: ನಾಲ್ಕು ರಥಯಾತ್ರೆಗಳಲ್ಲಿ ಈಗಾಗಲೇ ಎರಡು ರಥಯಾತ್ರೆಗಳಿಗೆ ಚಾಲನೆ ಸಿಕ್ಕಿದ್ದು, ಬಾಕಿ ಇರುವ ಎರಡು ರಥಯಾತ್ರೆಗಳಿಗೆ ನಾಳೆ ಚಾಲನೆ ಸಿಗಲಿದೆ. ಬಾಕಿ ಇರುವ ಎರಡೂ ರಥಯಾತ್ರೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದು, ಅದಕ್ಕಾಗಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ರಾಜ್ಯದ ನಾಲ್ಕು ದಿಕ್ಕಿನಿಂದ ನಾಲ್ಕು ರಥಯಾತ್ರೆ ಆರಂಭಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಹೆಸರಿನಲ್ಲಿ ಆರಂಭಿಸಿರುವ ಮೊದಲ ರಥಯಾತ್ರೆಗೆ ಮಲೆಮಹಾದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಿದರೆ, ಎರಡನೇ ರಥಯಾತ್ರೆಗೆ ನಂದಗಢದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಇದೀಗ ಮೂರು ಮತ್ತು ನಾಲ್ಕನೇ ರಥಯಾತ್ರೆಗೆ ಒಂದೇ ದಿನ ಎರಡು ಕಡೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜೊತೆ ಅನೌಪಚಾರಿಕ ಚರ್ಚೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣಿಸಲಿರುವ ಅಮಿತ್ ಶಾ, ಮಧ್ಯಾಹ್ನ 12.20ಕ್ಕೆ ಬೀದರ್ ಜಿಲ್ಲೆ ಬಸವಕಲ್ಯಾಣದ ನೂತನ ಅನುಭವ ಮಂಟಪ ಸ್ಥಳದಲ್ಲಿ ವಿಜಯ ಸಂಕಲ್ಪ 3ನೇ ರಥಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 1.15 ಕ್ಕೆ ಆಯೋಜನೆ ಮಾಡಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಮಿತ್ ಶಾ ಭಾಷಣ ಮಾಡಲಿದ್ದಾರೆ.

ಬಸವ ಕಲ್ಯಾಣ ಕಾರ್ಯಕ್ರಮ ಮುಗಿಸಿ ಮತ್ತೆ ಬೆಂಗಳೂರು ಕಡೆ ವಾಪಸಾಗಲಿರುವ ಅಮಿತ್ ಶಾ ಸಂಜೆ 4.50ಕ್ಕೆ ಆವಟಿಯ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ. ನಂತರ ಕೆಂಪೇಗೌಡರು ಹುಟ್ಟಿದ ಮುಹೂರ್ತದಲ್ಲಿ ಸಂಜೆ 5.10ಕ್ಕೆ ದೇವನಹಳ್ಳಿಯ ಸರ್ಕಾರಿ ಕಾಲೇಜು ಆವರಣದಲ್ಲಿ ವಿಜಯ ಸಂಕಲ್ಪ 4ನೇ ರಥಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಪಕ್ಷದ ವತಿಯಿಂದ ಆಯೋಜನೆ ಮಾಡಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದು, ನಾಳೆ ರಾತ್ರಿಯೇ ನವದೆಹಲಿಗೆ ವಾಪಸಾಗಲಿದ್ದಾರೆ.

ಈ ನಾಲ್ಕೂ ರಥಯಾತ್ರೆಗಳಲ್ಲಿ 50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8,000 ಕಿ.ಮೀ ಯಾತ್ರೆ ಸಂಚರಿಸಲಿದೆ. ಯಾತ್ರೆಯ ಉದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರ‍್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್ ಶೋಗಳು ಸಹ ಜರುಗಲಿವೆ. ಈ ಮೂಲಕ ನಾಡಿನ 4 ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ.

ಯಾತ್ರೆಯ ಅವಧಿ 20 ದಿನಗಳಾಗಿದ್ದು, ಮಾರ್ಚ್ 25ರಂದು ದಾವಣಗೆರೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಮೆಗಾ ರ‍್ಯಾಲಿಯ ಸಮಾರೋಪ ಸಮಾರಂಭ ನಡೆಯಲಿದೆ. ರಥಯಾತ್ರೆಯ ಉದ್ದಕ್ಕೂ ಬಿಜೆಪಿ ಸರ್ಕಾರಗಳ ಸಾಧನೆ, ಕಾಂಗ್ರೆಸ್‍ನ ಹುಸಿ ಭರವಸೆಗಳ ಬಗ್ಗೆ ತಿಳಿಸಲಾಗುತ್ತದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಇದನ್ನೂ ಓದಿ:ಚುನಾವಣಾ ಪ್ರಚಾರದ ಕಣಕ್ಕೆ ಧುಮುಕಿದ ಬಿಜೆಪಿ: ಪ್ರಗತಿ ರಥಯಾತ್ರೆಗೆ ಚಾಲನೆ

ABOUT THE AUTHOR

...view details