ಕರ್ನಾಟಕ

karnataka

ETV Bharat / state

ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ : ಶೂನ್ಯ ತ್ಯಾಜ್ಯ ಅಡುಗೆ ಮನೆ ಕುರಿತು ಶ್ಲಾಘನೆ - ಈಟಿವಿ ಭಾರತ ಕನ್ನಡ

ಅದಮ್ಯ ಚೇತನ ಸಂಸ್ಥೆ ನಡೆಸುವ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಅಮಿತ್​ ಶಾ ಭೇಟಿ - ಅನಂತ ಸೇವಾ ಉತ್ಸವದಲ್ಲಿ ಶಾ ಭಾಗಿ - ತೇಜಸ್‌ ಯುದ್ಧ ವಿಮಾನ ಅಭಿವೃದ್ಧಿಯ ಯಶೋಗಾಥೆ ಪುಸ್ತಕ ಲೋಕಾರ್ಪಣೆ

amit-shah-visited-the-zero-waste-kitchen-run-by-adhamya-chetana-organization
ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ : ಶೂನ್ಯ ತ್ಯಾಜ್ಯ ಅಡುಗೆ ಮನೆ ನೋಡಿ ಶ್ಲಾಘನೆ

By

Published : Dec 31, 2022, 9:37 PM IST

ಬೆಂಗಳೂರು: ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯಂತಹ ಹೊಸ ಸಾಧ್ಯತೆಗಳನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ವೀಕ್ಷಿಸಿದರು. ನಗರದ ಗವಿಪುರಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಇಂದು ಸಂಜೆ ಭೇಟಿ ನೀಡಿ, ಪ್ರತಿನಿತ್ಯದ ಅಡುಗೆ ತಯಾರಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅದಮ್ಯ ಚೇತನ ಸಂಸ್ಥೆ ಸ್ಥಾಪನೆಯ ಹಿಂದೆ ದಿವಂಗತ ಅನಂತಕುಮಾರ್‌ ಅವರ ಅದಮ್ಯ ಕನಸುಗಳ ಬಗ್ಗೆ ಡಾ. ತೇಜಸ್ವಿನಿ ಅನಂತಕುಮಾರ್‌ ಅವರು ಗೃಹ ಸಚಿವರಿಗೆ ವಿವರಣೆ ನೀಡಿದರು.

ಶೂನ್ಯ ತ್ಯಾಜ್ಯ ಅಡುಗೆ : ಪ್ರತಿ ನಿತ್ಯ ಸುಮಾರು 70 ಸಾವಿರಕ್ಕೂ ಹೆಚ್ಚು ಊಟಗಳನ್ನು ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ತ್ಯಾಜ್ಯ ಉತ್ಪತ್ತಿಯಾಗುವುದಿಲ್ಲ. ಹಾಗೆಯೇ, ಉಪಯೋಗಿಸಿದ ನೀರಿನ ಮರುಬಳಕೆಯನ್ನು ಮಾಡಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸದೇ ಅಡುಗೆ ಮಾಡುವುದು ಈ ಅಡುಗೆ ಮನೆಯ ಮತ್ತೊಂದು ವಿಶೇಷವಾಗಿದೆ.

ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ : ಶೂನ್ಯ ತ್ಯಾಜ್ಯ ಅಡುಗೆ ಮನೆ ನೋಡಿ ಶ್ಲಾಘನೆ

ತೇಜಸ್‌ ಯುದ್ಧ ವಿಮಾನ ಅಭಿವೃದ್ಧಿಯ ಯಶೋಗಾಥೆ: ಬಳಿಕ ಅನಂತ ಸೇವಾ ಉತ್ಸವದಲ್ಲಿ ಭಾಗವಹಿಸಿ "ತೇಜಸ್‌ ಯುದ್ಧ ವಿಮಾನ ಅಭಿವೃದ್ಧಯ ಯಶೋಗಾಥೆ" ಎನ್ನುವ ಪುಸ್ತಕದ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆಗೊಳಿಸಿದರು. ಸಂಪೂರ್ಣ ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನದ ವಿನ್ಯಾಸದಲ್ಲಿ ಡಾ.ತೇಜಸ್ವಿನಿ ಅನಂತಕುಮಾರ್‌ ಅವರು ಸೇವೆ ಸಲ್ಲಿಸಿದ್ದರು. ಈ ಪುಸ್ತಕದ ಕನ್ನಡ ಅವತರಣಿಕೆಯ ಲೋಕಾರ್ಪಣೆಯ ಸಂದರ್ಭದಲ್ಲಿ ಅವರ ಸಹದ್ಯೋಗಿಗಳನ್ನು ನೆನೆಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕಂದಾಯ ಸಚಿವ ಆರ್‌ ಅಶೋಕ್​, ಸಹಕಾರ ಸಚಿವ ಎಸ್‌ .ಟಿ. ಸೋಮಶೇಖರ್‌, ಗೃಹ ಸಚಿವ ಅರಗ ಜ್ಞಾನೇಂದ್ರ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ನಂದಕುಮಾರ್‌, ಪ್ರದೀಪ್‌ ಓಕ್‌, ಐಶ್ಚರ್ಯ ಅನಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಆದಿಚುಂಚನಗಿರಿ ಮಠಕ್ಕೆ ಭೇಟಿ.. ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಶಾ

ಭಾರತೀಯ ಪರಂಪರೆ ರಕ್ಷಣೆಯ ಸಂಕಲ್ಪ:ಈ ವರ್ಷದ ಸಂಕಲ್ಪ ಎಂದರೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ಶ್ರಮಿಸುವುದಾಗಿದೆ. ನಮ್ಮ ಈ ಸಂಕಲ್ಪಕ್ಕೆ ವೇದಿಕೆಯಲ್ಲಿರುವ ಮೂವರು ಹಿರಿಯರು ಬೆಂಬಲ ನೀಡುತ್ತಿದ್ದಾರೆ. ಇದು ಒಂದು ವರ್ಷಕ್ಕೆ ಸೀಮಿತವಾಗದೆ ಮತ್ತು ಮುಂದುವರಿಯಲಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದರು.

ಅದಮ್ಯ ಚೇತನ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ (ಡಿಸೆಂಬರ್ 31) ಅಮೃತ ಮಹೋತ್ಸವ ಹಾಗೂ ಅನಂತ ಸೇವಾ ಉತ್ಸವ ಹೆಸರಿನಲ್ಲಿ ವಾರ್ಷಿಕ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿದೆ. ಬೇಲಿಮಠದ ಶಿವರುದ್ರ ಸ್ವಾಮೀಜಿ, ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅನಂತ ಸೇವಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಉಪಸ್ಥಿತರಿದ್ದರು.

ಉತ್ಸವ ಕುರಿತು ಸಂತಸ ಹಂಚಿಕೊಂಡ ಡಾ.ತೇಜಸ್ವಿನಿ ಅನಂತಕುಮಾರ್, ಅನಂತ್ ಕುಮಾರ್ ಅವರಿಗೆ ಪ್ರೇರಣೆ ಕೊಟ್ಟವರು ಗಿರಿಜಾ ಶಾಸ್ತ್ರಿ ಅವರು. ಅವರ ನೆನಪಿನಲ್ಲಿ ಈ ಸಂಸ್ಥೆ ನಡೆಯುತ್ತಿದೆ. ಇದು ಈಗ 25 ವರ್ಷಗಳನ್ನು ಪೂರೈಸಿ, 26ನೇ ವಸಂತಕ್ಕೆ ಕಾಲಿಟ್ಟಿದೆ. ಕಳೆದ 20 ವರ್ಷಗಳಿಂದ ಮಕ್ಕಳಿಗೆ ಅನ್ನದಾಸೋಹ ನಡೆಯುತ್ತಿದೆ. ಬೆಂಗಳೂರು ಹುಬ್ಬಳ್ಳಿ ಮತ್ತು ಕಲಬುರಗಿ ಹಾಗೂ ರಾಜಸ್ಥಾನದಲ್ಲಿ ಅನ್ನಪೂರ್ಣ ಯೋಜನೆ ಪ್ರಾರಂಭವಾಗಿದ್ದು, ಸುಮಾರು 55 ಕೋಟಿಯಷ್ಟು ಊಟಗಳನ್ನು ಉಣಬಡಿಸಿದೆ. ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ಮತ್ತು ನಿಮ್ಮೆಲ್ಲರ ಸಹಕಾರದಿಂದ ಈ ಯೋಜನೆ ಮುಂದುವರಿಯುತ್ತಿದೆ ಎಂದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತೀ ಸ್ವಾಮೀಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಭಾನುವಾರ ಬೆಳಿಗ್ಗೆ 10 ರಿಂದ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಎ-ಚಾಟ್ ಕಾರ್ಯಕ್ರಮ, ಪದ್ಮಿನಿ ಓಕ್ ತಂಡದಿಂದ ಸಂಗೀತ ಚಿತ್ರ ಕಾರ್ಯಕ್ರಮ, ಸಂಜೆ 4ಕ್ಕೆ ಸಹಸ್ರ ಕಂಠಗಳಿಂದ ಗೀತ ಸಮರ್ಪಣೆ ಹಾಗೂ ಅಖಂಡ ವಂದೇ ಮಾತರಂ ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ABOUT THE AUTHOR

...view details