ಬೆಂಗಳೂರು:ಕಳೆದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಬೆನ್ನಲ್ಲೇ ಉದ್ಯಾನನಗರಿ ಬೆಂಗಳೂರಿನ ಮೂರು ಕಡೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮಂಗಳವಾರ ಸಂಜೆ 4.30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ಚುನಾವಣಾ ಚಾಣಕ್ಯ 4.50 ರಿಂದ 5.40 ರವರೆಗೆ ಮೊದಲನೇ ರೋಡ್ ಶೋ ನಡೆಸಲಿದ್ದಾರೆ. ಆಡುಗೋಡಿ ಸಿಗ್ನಲ್ನಿಂದ ಮಡಿವಾಳದ ಟೋಟಲ್ ಮಾಲ್ವರೆಗೂ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಸಂಜೆ 5.50 ರಿಂದ 6.40 ರವರೆಗೆ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಜಯನಗರದ ಶಾಲಿನಿ ಮೈದಾನದವರೆಗೆ ಎರಡನೇ ರೋಡ್ ಶೋ ನಡೆಸಲಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಡಿಕೆಶಿ ರೋಡ್ ಶೋ: ಅಭ್ಯರ್ಥಿಗಳ ಪರ ಮತಬೇಟೆ
ಬಿಟಿಎಂ ಲೇಔಟ್ ಹಾಗು ಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಮತ ತಪ್ಪಬಾರದೆಂದು ಬಿಜೆಪಿ ಪಣ ತೊಟ್ಟಿದ್ದು ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಸಂಜೆ 7.00-7.50 ರವರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ನಾಗರಬಾವಿ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. ಗೋವಿಂದರಾಜನಗರದಲ್ಲಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ವಿಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಹೀಗಾಗಿ ಇಲ್ಲಿ ಅಮಿತ್ ಶಾ ಮತಬೇಟೆ ಮಹತ್ವ ಪಡೆದುಕೊಂಡಿದೆ. ನಾಳೆ ರಾತ್ರಿ 8.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 11.10 ಕ್ಕೆ ಅಮಿತ್ ಶಾ ನವದೆಹಲಿ ತಲುಪಲಿದ್ದಾರೆ.