ಬೆಂಗಳೂರು:ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯದ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ. ಈ ನಡುವೆ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಲಿಂಗಾಯತ ವಿರೋಧಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಸೇರಿದಂತೆ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಆಗಮಿಸಿರುವ ಅಮಿತ್ ಶಾ ಸಂಜೆ 6 ರಿಂದ 7 ರವರೆಗೆ ಸಮಯವನ್ನು ಕಾಯ್ದಿರಿಸಿದ್ದು, ಆಯ್ದ ನಾಯಕರ ಜೊತೆ ಸಮಾಲೋಚನೆ ನಡೆಸಿ ಸಂಜೆ 7 ರಿಂದ 7.40 ರವರೆಗೆ ಭೋಜನಕ್ಕೆ ಸಮಯ ಕಾಯ್ದಿರಿಸಿದ್ದಾರೆ. ರಾತ್ರಿ 7.45 ರಿಂದ 9.00 ಗಂಟೆವರೆಗೂ ರಾಜಕೀಯ ವಿಷಯಗಳ ಕುರಿತು ಪಕ್ಷದ ಜೊತೆ ಸಭೆಗೆ ಸಮಯ ನಿಗದಿಯಾಗಿತ್ತು. ಆದರೆ ದೇವನಹಳ್ಳಿ ರೋಡ್ ಶೋ ರದ್ದಾದ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಮೊದಲೇ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಆಗಮಿಸಿರುವ ಅಮಿತ್ ಶಾ ಭೋಜನ ಕೂಟದೊಂದಿಗೆ ಸಭೆಯನ್ನು ಒಟ್ಟಿಗೆ ನಡೆಸಲು ನಿರ್ಧರಿಸಿದ್ದಾರೆ.
ಹಾಗಾಗಿ ಎರಡು ಹಂತದ ಸಭೆ ಒಟ್ಟಿಗೆ ನಡೆಯುತ್ತಿದೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಸೇರಿದಂತೆ ಚುನಾವಣಾ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ಒಟ್ಟು 54 ಮುಖಂಡರು ಅಮಿತ್ ಶಾ ನಡೆಸುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿ ಅಣ್ಣಾಮಲೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಸಭೆಗೆ ಆಹ್ವಾನಿಸಲಾಗಿದೆ.
ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅಮಿತ್ ಶಾ, ರಾಜ್ಯ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಬಂಡಾಯ ಶಮನಕ್ಕೆ ನಡೆಸಿರುವ ಪ್ರಯತ್ನಗಳ ಕುರಿತು ರಾಜ್ಯದ ನಾಯಕರು ವಿವರಣೆ ನೀಡಲಿದ್ದಾರೆ. ಈ ಬಾರಿ 73 ಕಡೆ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ಅಲ್ಲೆಲ್ಲಾ ಬಂಡಾಯ ಶಮನಕ್ಕೆ ನಡೆಸಿರುವ ಪ್ರಯತ್ನ ಮತ್ತು ಪ್ರಸ್ತುತ ಸನ್ನಿವೇಶಗಳ ವಿವರ ನೀಡಲಿದ್ದಾರೆ. ಇದೇ ವೇಳೆ, ಬಹು ಮುಖ್ಯವಾಗಿ ಲಿಂಗಾಯತ ವಿರೋಧಿ ಬಿಜೆಪಿ ಎನ್ನುವ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗ ಮಾಡುತ್ತಿರುವ ಕುರಿತು ಚರ್ಚೆ ನಡೆಯಲಿದೆ.