ಬೆಂಗಳೂರು:ರಾಜ್ಯದ ಚುನಾವಣಾ ರಣಕಣದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ರಾಜ್ಯದಲ್ಲಿ ಪ್ರಚಾರ ಆರಂಭಿಸಿದ್ದರೆ, ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ನಾಯಕರು ಸಹ ಪ್ರಚಾರದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಬಿಜೆಪಿ ನಾಯಕರು ಭರ್ಜರಿ ರೋಡ್ ಶೋಗಳ ಮೂಲಕ ಮತಬೇಟೆಗೆ ಇಳಿದಿದ್ದು, ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿವಿಧೆಡೆ ರೋಡ್ ಶೋ, ಸಾರ್ವಜನಿಕ ಸಮಾವೇಶಗಳಲ್ಲಿ ಪಾಲ್ಗೊಂಡು ಮತಯಾಚನೆ ನಡೆಸಲಿದ್ದಾರೆ.
ಬಿಜೆಪಿಯ ಘಟಾನುಘಟಿ ನಾಯಕರು ಚುನಾವಣಾ ಅಖಾಡದತ್ತ ಮುಖ ಮಾಡುತ್ತಿದ್ದಾರೆ. ಸೋಮವಾರ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಮೈಸೂರು, ಗುಂಡ್ಲುಪೇಟೆ, ಹಾಸನ, ಸಕಲೇಶಪುರ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶ, ರೋಡ್ ಶೋಗಳಲ್ಲಿ ಪಾಲ್ಗೊಂಡು ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ.
ಬಳಿಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ತೆರಳಿ ಭರ್ಜರಿ ರೋಡ್ ಶೋ ಕೈಗೊಳ್ಳಲಿದ್ದಾರೆ. ಬಳಿಕ ಸಕಲೇಶಪುರದ ಅಲೂರಿನಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಹುಬ್ಬಳ್ಳಿಗೆ ಆಗಮಿಸಿ ರಾತ್ರಿ ಚುನಾವಣಾ ಕಾರ್ಯ ಸಮಿತಿ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲಿದ್ದಾರೆ.
ಜೆ.ಪಿ. ನಡ್ಡಾ ಮತಬೇಟೆ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದು, ದಿನಪೂರ್ತಿ ರೋಡ್ ಶೋ, ಸಮಾವೇಶ ನಡೆಸಿ ಮತಯಾಚನೆ ಮಾಡಲಿದ್ದಾರೆ. ನಡ್ಡಾ ಅವರು ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.