ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮಿಷನ್-150 ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ಪಕ್ಷ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಮುಂದಾಗಿದೆ. ಅದಕ್ಕಾಗಿ ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದ್ದು, ಒಡೆಯರ್ ಆಳಿದ ಪ್ರಾಂತ್ಯದಲ್ಲಿ ಕೇಸರಿ ಅಲೆ ಎಬ್ಬಿಸುವಂತೆ ಸೂಚನೆ ನೀಡಿದೆ.
2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ತಿಂಗಳು ಅಂತರದಲ್ಲೇ ಅಮಿತ್ ಶಾ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಹೈಕಮಾಂಡ್ ಚಿತ್ತ ಕರ್ನಾಟಕದತ್ತ ಎನ್ನುವ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ಶತಾಯಗತಾಯ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಸಂಕಲ್ಪದೊಂದಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ನಾಯಕರಿಗೆ ಹೊಸ ಟಾಸ್ಕ್ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಭದ್ರವಾಗಿದೆ. ಅತಿ ಹೆಚ್ಚು ಸ್ಥಾನಗಳು ಬಿಜೆಪಿ ಬರುವುದರಲ್ಲಿ ಅನುಮಾನವಿಲ್ಲ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದಲ್ಲಿಯೂ ಕೇಸರಿ ಪಕ್ಷ ಪ್ರಬಲವಾಗಿದೆ. ಆದರೆ, ದಕ್ಷಿಣ ಕರ್ನಾಟಕ ಭಾಗ ಅಂದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಬಹಳಷ್ಟು ದುರ್ಬಲವಾಗಿದೆ. ಎಷ್ಟೇ ಪ್ರಯತ್ನ ನಡೆಸಿದರೂ ಇಲ್ಲಿ ಕಮಲಕ್ಕೆ ನೆಲೆ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಅಮಿತ್ ಶಾ ನೀಡಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಬರುವ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪಕ್ಷ ಬಲಪಡಿಸಬೇಕು, ಸಂಘಟನೆ ಚುರುಕುಗೊಳಿಸಬೇಕು. ಚುನಾವಣೆಯಲ್ಲಿ ಈ ಭಾಗದಿಂದ ಸಾಧಾರಣ ಪ್ರಮಾಣದಲ್ಲಿಯಾದರೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕು ಎನ್ನುವ ಟಾಸ್ಕ್ ನೀಡಿದ್ದಾರೆ. ಅಮಿತ್ ಶಾ ಸೂಚನೆ ನೀಡುತ್ತಿದ್ದಂತೆ ಮೂರು ಜಿಲ್ಲೆಗಳಿಗೆ ಮೂವರು ಉಸ್ತುವಾರಿಗಳನ್ನು ಕಳುಹಿಸಿಕೊಡಲಾಗಿದ್ದು, ಸೈನಿಕನಿಗೂ ಜವಾಬ್ದಾರಿ ನೀಡಿ ಕಮಲ ಅರಳಿಸಲು ಬೇಕಾದ ತಂತ್ರ ರೂಪಿಸಲು ಮುಂದಾಗಿದೆ. ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳು ಸಿಗದೇ ಇದ್ದಲ್ಲಿ ಬೇರೆ ಪಕ್ಷದ ನಾಯಕರನ್ನಾದರೂ ಸೆಳೆದು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಆಪರೇಷನ್ ಕಮಲದ ಮೂಲಕ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸಲು ಚಿಂತನೆ ನಡೆಸಲಾಗಿದೆ.
ರಾಮನಗರ ಜವಾಬ್ದಾರಿ ಅಶ್ವತ್ಥ ನಾರಾಯಣ ಹೆಗಲಿಗೆ:ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ಒಂದು ಕಾಂಗ್ರೆಸ್, ಮೂರು ಜೆಡಿಎಸ್ ಪಾಲಾಗಿದ್ದು, ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹಾಗಾಗಿ ರಾಮನಗರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರಿಗೆ ಸೂಚನೆ ನೀಡಲಾಗಿದೆ. ಅದರಂತೆ ಹೆಚ್ಚು ಹೆಚ್ಚು ಸರ್ಕಾರಿ ಕಾರ್ಯಕ್ರಮಗಳ ಆಯೋಜನೆ ಮಾಡಿ ಜನಮನ್ನಣೆ ಗಳಿಸುವ ಕೆಲಸಕ್ಕೆ ಅಶ್ವತ್ಥನಾರಾಯಣ ಮುಂದಾಗಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳನ್ನಾದರೂ ಗೆಲ್ಲಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಖಾತೆ ತೆರೆದರೂ ಸಾಕು ಎನ್ನುವ ನಿರ್ಧಾರದೊಂದಿಗೆ ಅಶ್ವತ್ಥ ನಾರಾಯಣ ಅಖಾಡಕ್ಕಿಳಿದಿದ್ದಾರೆ.
ಮಂಡ್ಯದಲ್ಲಿ ಆಪರೇಷನ್:ಮಂಡ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಮೊದಲ ಗೆಲುವು ಕಂಡಿದೆ. ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ನಾರಾಯಣಗೌಡಗೆ ಜಿಲ್ಲೆಯ ಜವಾಬ್ದಾರಿ ನೀಡಲಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಟಾಸ್ಕ್ ನೀಡಲಾಗಿದೆ. ನಾರಾಯಣಗೌಡಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೂ ಮಂಡ್ಯದ ಸಂಘಟನೆಯತ್ತ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಹಾಗಾಗಿ ಹೈಕಮಾಂಡ್ ಅಣತಿಯಂತೆ ಆಪರೇಷನ್ ಕಮಲಕ್ಕೆ ಈ ನಾಯಕರು ಚಿಂತನೆ ನಡೆಸಿದ್ದಾರೆ. ಸದ್ಯ ಇಲ್ಲಿ ಏಳು ಕ್ಷೇತ್ರಗಳಲ್ಲಿ ಆರು ಜೆಡಿಎಸ್ ತೆಕ್ಕೆಯಲ್ಲಿವೆ.
ಲಕ್ಷ್ಮಿಗೆ ಬಿಜೆಪಿ ಗಾಳ:ಮಾಜಿ ಐಆರ್ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಸೆಳೆಯಲು ಮುಂದಾಗಿದೆ. ಮಂಡ್ಯ ಲೋಕಸಭೆಗೆ ಜೆಡಿಎಸ್ನಿಂದ ಸ್ಪರ್ಧಿಸಲು ಮುಂದಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ, ನಿಖಿಲ್ ಸ್ಪರ್ಧೆಯಿಂದ ಅವಕಾಶ ವಂಚಿತವಾಗಬೇಕಾಯಿತು. ಈಗ ಮತ್ತೊಮ್ಮೆ ನಿಖಿಲ್ ಸ್ಪರ್ಧೆ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮಿಗೆ ಬಿಜೆಪಿ ಗಾಳ ಹಾಕಿದೆ. ವಿಧಾನಸಭೆ ಟಿಕೆಟ್ ಭರವಸೆ ನೀಡಿ ಬಿಜೆಪಿಯತ್ತ ಸೆಳೆಯಲು ಹೊರಟಿದೆ. ಇವರ ಜೊತೆ ಜೆಡಿಎಸ್ನ ಮಾಜಿ ಸಚಿವ ಎಸ್.ಟಿ ಜಯರಾಮ್ ಪುತ್ರ ಅಶೋಕ್ ಜಯರಾಂಗೂ ಬಿಜೆಪಿ ಗಾಳ ಹಾಕಿದೆ. ಒಂದು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ.
ಸುಮಲತಾ ಸೆಳೆಯುವ ಯತ್ನ:ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಬೆಂಬಲ ನೀಡಿದ್ದ ಬಿಜೆಪಿ ಇದೀಗ ಪಕ್ಷೇತರ ಸಂಸದೆಯಾಗಿರುವ ಸುಮಲತಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಸುಮಲತಾ ಬಿಜೆಪಿ ಸೇರಿದಲ್ಲಿ ಅಂಬರೀಷ್ ಬೆಂಬಲಿಗರು ಬಿಜೆಪಿ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ಗೆ ಮದ್ದೂರು ಟಿಕೆಟ್ ನೀಡಿ ಅನುಕಂಪ ಗಿಟ್ಟಿಸಿಕೊಂಡು ಪಕ್ಷಕ್ಕೆ ನೆಲೆ ಕಲ್ಪಿಸಬೇಕು ಎನ್ನುವ ಆಲೋಚನೆ ಮಾಡಿದ್ದಾರೆ. ಸುಮಲತಾ ಆಪ್ತ ಸಚ್ಚಿದಾನಂದ ಅವರನ್ನೂ ಬಿಜೆಪಿ ಸಂಪರ್ಕಿಸಿದ್ದು, ಶ್ರೀರಂಗಪಟ್ಟಣದ ಟಿಕೆಟ್ ಆಶ್ವಾಸನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೈಸೂರು ಗೆಲ್ಲಲು ಜಿಟಿಡಿಗೆ ಗಾಳ:ಮೈಸೂರಿನಲ್ಲಿ ಬಿಜೆಪಿ ಸಂಸದರಿದ್ದು, ಶಾಸಕರಿದ್ದರೂ ಪ್ರಭಾವಿ ನಾಯಕರ ಕೊರತೆ ಇದೆ. ಹಾಗಾಗಿ ಜೆಡಿಎಸ್ನ ಹಿರಿಯ ನಾಯಕ, ಮಾಜಿ ಸಚಿವ ಜಿ.ಟಿ ದೇವೇಗೌಡರಿಗೆ ಬಿಜೆಪಿ ಗಾಳ ಹಾಕಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಬಿಜೆಪಿಗೆ ಆಪ್ತರಾಗಿದ್ದ ಜಿಟಿಡಿ ಈಗ ಅಂತರ ಕಾಯ್ದುಕೊಂಡಿದ್ದಾರೆ. ಅವರನ್ನ ಮತ್ತೆ ಸಂಪರ್ಕಿಸಿ ಅವರ ಪುತ್ರನಿಗೆ ಟಿಕೆಟ್ ನೀಡಿವ ಆಶ್ವಾಸನೆ ನೀಡಿ, ಪಕ್ಷಕ್ಕೆ ಬರಮಾಡಿಕೊಳ್ಳಬೇಕು. ಆ ಮೂಲಕ ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಬೇಕು ಎನ್ನುವ ಚಿಂತನೆ ಬಿಜೆಪಿಯಲ್ಲಿದೆ. ಈ ಸಂಬಂಧ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಾರ್ಯೋನ್ಮುಖರಾಗಿದ್ದಾರೆ.