ದೇವನಹಳ್ಳಿ: ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷದ ಶಾಸಕರನ್ನ ಗೆಲ್ಲಿಸುವ ಕಾರಣಕ್ಕೆ ನಿನ್ನೆ (ಶುಕ್ರವಾರ) ಅಮಿತ್ ಶಾ ಅವರ ರೋಡ್ ಶೋ ಆಯೋಜನೆ ಮಾಡಲಾಗಿತ್ತು. ಆದರೆ ಸಂಜೆ ಸುರಿದ ಭಾರಿ ಮಳೆಯಿಂದ ಕೊನೆಯ ಕ್ಷಣದಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಶೀಘ್ರದಲ್ಲೇ ದೇವನಹಳ್ಳಿಗೆ ಬರುವುದಾಗಿ ಹೇಳಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರೋಡ್ ಶೋ ಆಯೋಜನೆ ಮಾಡಲಾಗಿತ್ತು. ಪಟ್ಟಣದ ಗಣೇಶನ ದೇವಸ್ಥಾನದಿಂದ ಕೋಲಾರ ಕ್ರಾಸ್ವರೆಗೆ 3 ಕಿ.ಮೀಗಳ ರೋಡ್ ಶೋಗೆ ಸಕಲ ಸಿದ್ಧತೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳಲು ಅಮಿತ್ ಶಾ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆದರೆ ರೋಡ್ ಶೋ ಪ್ರಾರಂಭವಾಗುವ ಒಂದು ಗಂಟೆ ಮುನ್ನ ಬಿರುಗಾಳಿ ಸಹಿತ ಭಾರಿ ಮಳೆಯಿಂದ ರದ್ದು ಮಾಡಲಾಯಿತು.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ "ಭಾರಿ ಮಳೆಯಿಂದಾಗಿ ದೇವನಹಳ್ಳಿ ಜನತೆಯೊಂದಿಗಿರಲು ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ ಜನಸ್ತೋಮಕ್ಕೆ ಕೃತಜ್ಞನಾಗಿದ್ದೇನೆ. ಪ್ರಚಾರಕ್ಕಾಗಿ ದೇವನಹಳ್ಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಕರ್ನಾಟಕದ ಜನರ ಉತ್ಸಾಹವು ಬಿಜೆಪಿ ಬೃಹತ್ ಗೆಲುವು ಸಾಧಿಸಲಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ" ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋ ಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. ಮೋದಿ ಮತ್ತು ಅವರ ಮೇಲಿನ ನಿಸ್ವಾರ್ಥ ಪ್ರೀತಿಯೇ ಬಿಜೆಪಿ ಗಳಿಸಿದ್ದು ಮತ್ತು ಅದು ಶಕ್ತಿಯ ಮೂಲವಾಗಿದೆ ಎಂದು ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.