ಬೆಂಗಳೂರು: ಪ್ರಮುಖ ನಾಯಕರ ಜೊತೆಗಿನ ಉಪಹಾರ ಕೂಟದ ಸಭೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದಾರೆ. ದಿಢೀರ್ ಸಭೆ ರದ್ದಿಗೆ ಕಾರಣ ತಿಳಿದು ಬಂದಿಲ್ಲ, ಇದರ ಜೊತೆ ಸಿಎಂ ಜೊತೆಗಿನ ಪ್ರತ್ಯೇಕ ಮಾತುಕತೆಯೂ ನಡೆದಿಲ್ಲ ಇದರಿಂದಾಗಿ ಸಂಪುಟ ವಿಸ್ತರಣೆಗೆ ಮತ್ತೆ ಗ್ರಹಣ ಹಿಡಿದಂತಾಗಲಿದೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕರೆದಿದ್ದ ಮುಖಂಡರ ಬ್ರೇಕ್ ಫಾಸ್ಟ್ ಮೀಟಿಂಗ್ನ್ನು ರದ್ದು ಪಡಿಸಿದ್ದಾರೆ. ಕೋರ್ ಕಮಿಟಿ ಸದಸ್ಯರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲು ಅಮಿತ್ ಶಾ ಉದ್ದೇಶಿಸಿದ್ದರು ಇದಕ್ಕೆ ಸಿದ್ಧತೆಯೂ ನಡೆದಿತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಸಭೆಯನ್ನು ರದ್ದುಪಡಿಸಿದ್ದಾರೆ. ಪ್ರಮುಖರ ಸಭೆ ಈಗ ಬೇಡ ಎನ್ನುವ ಸಂದೇಶವನ್ನು ಸಿಎಂ ಕಚೇರಿ ಮತ್ತು ಜಗನ್ನಾಥ ಭವನಕ್ಕೆ ತಲುಪಿಸಲಾಯಿತು.
ಕಳೆದ ರಾತ್ರಿಯೇ ವಿಸ್ತೃತ ಚರ್ಚೆ ನಡೆಸಿ, ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಅಗತ್ಯ ಸಲಹೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇಂದಿನ ಸಭೆ ರದ್ದುಪಡಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತ್ಯೇಕವಾಗಿ ಮಾತುಕತೆ:ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಅಮಿತ್ ಶಾ ಇಂದು ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು ಹಾಗಾಗಿ ರಮೇಶ್ ಜಾರಕಿಹೊಳಿ ಮುಂಜಾನೆಯೇ ಆರ್‌ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ್ದರು. ಸಂಪುಟಕ್ಕೆ ಮರು ಸೇರ್ಪಡೆ ವಿಷಯದ ಕುರಿತು ಚರ್ಚಿಸಿದ್ದರು. ಅಗತ್ಯತೆ ಕುರಿತ ಮಾಹಿತಿಯನ್ನು ಅಮಿತ್ ಶಾ ಗಮನಕ್ಕೆ ತರಬೇಕು, ಅಧಿವೇಶನ ನಡೆಯುವ ವೇಳೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.