ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೃಹ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಲ ಮಾರ್ಗಗಳ ಸಂಚಾರ ಬದಲಾವಣೆ ಮಾಡುವುದರ ಜೊತೆಗೆ 2,000 ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ವಿಧಾನಸೌಧ ಹಾಗೂ ವಿಕಾಸಸೌಧದ ಒಳಗೆ ಮತ್ತು ಹೊರಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಶ್ವಾನ ದಳ, ಬಾಂಬ್ ಪತ್ತೆ ದಳ ವಿಧಾನಸೌಧದ ಒಳಗೆ ಸಂಪೂರ್ಣ ತಪಾಸಣೆ ನಡೆಸಿದೆ. ವಿಧಾನಸೌಧದ ನಾಲ್ಕೂ ದ್ವಾರಗಳಲ್ಲಿ ಹೂವಿನಿಂದ ಅಲಂಕರಿಸಲಾಗಿದೆ. ಜೊತೆಗೆ ರೆಡ್ ಕಾರ್ಪೆಟ್ ಹಾಕಲಾಗಿದೆ.
ವಿಧಾನಸೌಧದ ಬಳಿ ಬಿಗಿ ಭದ್ರತೆ ಮಧ್ಯಾಹ್ನ 3 ಗಂಟೆ ನಂತರ ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕೆ.ಆರ್.ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೂ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇಂದು ಸಂಜೆ 4 ರ ಸುಮಾರಿಗೆ ಅಮಿತ್ ಶಾ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬ್ಯಾಂಕ್ವೆಟ್ ಹಾಲ್ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ವಿಧಾನಸೌಧದ ಸಿಬ್ಬಂದಿಗೆ ಅರ್ಧದಿನ ರಜೆ : ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅರ್ಧ ದಿನ ರಜೆಯನ್ನು ಸರ್ಕಾರ ನೀಡಿದೆ. ‘ಇಂದು ಮಧ್ಯಾಹ್ನ 1.30ರ ನಂತರ ಮನೆಗೆ ತೆರಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚನೆ ನೀಡಿತ್ತು.
ಸಾರ್ವಜನಿಕರಿಗೆ ನಿರ್ಬಂಧ :ಸಾರ್ವಜನಿಕರಿಗೆ ಬೆಳಗ್ಗೆಯಿಂದಲೇ ವಿಧಾನಸೌಧದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಗೃಹ ಇಲಾಖೆಯಿಂದ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ವಾಹನಗಳಿಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ವರ್ಚುಯಲ್ ಮೂಲಕ ಪೊಲೀಸ್ ಗೃಹ-2020 ರಡಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ, ವಿಜಯಪುರ - ಇಂಡಿಯಾ ರಿಸರ್ವ್ ಬೆಟಾಲಿಯನ್ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.