ಕರ್ನಾಟಕ

karnataka

ETV Bharat / state

ನೋ ಅಡ್ಜಸ್ಟ್​ಮೆಂಟ್ ಪಾಲಿಟಿಕ್ಸ್: ಹಳೆ ಮೈಸೂರು ಮುಖಂಡರಿಗೆ ಅಮಿತ್ ಶಾ ಖಡಕ್ ಸೂಚನೆ..! - ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ

ಬೆಂಗಳೂರಲ್ಲಿ ರಾಜ್ಯ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಿದರು. ಸಭೆಯಲ್ಲಿ ನಾಯಕರ ಅಭಿಪ್ರಾಯ ಸಂಗ್ರಹಿಸಿದರು.

ಅಮಿತ್ ಶಾ ಮಹತ್ವದ ಸಭೆ
ಅಮಿತ್ ಶಾ ಮಹತ್ವದ ಸಭೆ

By

Published : Dec 30, 2022, 9:41 PM IST

Updated : Dec 30, 2022, 11:00 PM IST

ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಯಾವ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ಮಾಡಬಾರದು ಎಂದು ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಘಟನೆ ಸರಿಹಾದಿಗೆ ತರಲು ಒಂದು ತಿಂಗಳ ಡೆಡ್ ಲೈನ್ ಕೊಟ್ಟಿದ್ದಾರೆ. ಮತ್ತೊಮ್ಮೆ ನಾನು ಬರುವಷ್ಟರಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ.

ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಳೆ ಮೈಸೂರು ಭಾಗದ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯ ಆರಂಭದಲ್ಲಿ 10 ನಿಮಿಷ ಭಾಷಣ ಮಾಡಿ, ನಂತರ ಮುಖಂಡಿಂದ ಅಭಿಪ್ರಾಯ ಸಂಗ್ರಹಿಸಿದರು. ಸಭೆಯಲ್ಲಿ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರತ್ಯೇಕ ವರದಿಯನ್ನು ಆಯಾ ಜಿಲಾಧ್ಯಕ್ಷರು ಕೊಟ್ಟಿದ್ದಾರೆ. ನಂತರ ಕ್ಷೇತ್ರವಾರು ರಾಜಕೀಯ ಚಿತ್ರಣ ಪಡೆದುಕೊಂಡ ಅಮಿತ್ ಶಾ, ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರ ಪರಿಚಯ ಮಾಡಿಕೊಂಡರು.

ಸಭೆಯಲ್ಲಿ ಬಿಜೆಪಿ ನಾಯಕರು

ಈ ವೇಳೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ಕೆಲ ನಾಯಕರು ಹಳೆ ಮೈಸೂರು ಭಾಗದಲ್ಲಿ ಒಳಮೈತ್ರಿ ಪಕ್ಷಕ್ಕೆ ಹಿನ್ನೆಡೆ ತರುತ್ತಿದೆ. ಅಂತರ ಕಾಯ್ದುಕೊಳ್ಳಬೇಕು, ಹೊಂದಾಣಿಕ ಮಾಡಿಕೊಳ್ಳಬಾರದು, ಎರಡೂ ಪಕ್ಷ ನಮಗೆ ಸಮಾನ ವಿರೋಧ ಪಕ್ಷಗಳಾಗಿದ್ದು, ಮೃಧು ಧೋರಣೆ ತಳೆಯಬಾರದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಮುಖಂಡರ ಅಭಿಪ್ರಾಯ ಆಲಿಸಿದ ನಂತರ ಸಭೆ ಕಡೆಯಲ್ಲಿ ಮತ್ತೊಮ್ಮೆ ಮಾತನಾಡಿದ ಅಮಿತ್ ಶಾ, ಹಳೆ ಮೈಸೂರು ಭಾಗದ ಸಂಘಟನೆ ಸಕ್ಸಸ್​ಗೆ 1 ತಿಂಗಳ ಗಡುವು ನೀಡಿದರು. ಮುಂದಿನ ತಿಂಗಳು ಬಂದಾಗ ನಮ್ಮ ಎಲ್ಲ ಯೋಜನೆಗಳು ಸರಿಯಾದ ಮಾರ್ಗದಲ್ಲಿ ಜಾರಿಯಾಗುತ್ತಿರಬೇಕು. ಈಗಿರುವ ವ್ಯವಸ್ಥೆ ಸುಧಾರಣೆ ಆಗಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್​​ಗೂ ನಮಗೂ ಸಂಬಂಧ ಇಲ್ಲ. ಈ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ನಮ್ಮ ಜೊತೆಗೆ ಸಂಬಂಧ ಇದೆ ಅಂತ ಹೇಳಿ ಜೆಡಿಎಸ್ ರಾಜಕೀಯ ಲಾಭ ಪಡೆಯಬಹುದು. ಈ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಪ್ಲಾನ್ ನಾವು ಮಾಡುತ್ತೇವೆ, ನೀವು ಅದನ್ನು ಕಾರ್ಯರೂಪಕ್ಕೆ ತನ್ನಿ. ಒಕ್ಕಲಿಗರ ಜೊತೆಗೆ ಇತರ ಸಮುದಾಯವನ್ನು ಸಹ ಜೋಡಿಸಿಕೊಂಡು ಹೋಗಿ. ಬೆಂಗಳೂರು ಭಾಗದಲ್ಲಿ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸ ಇದೆ. ಮೈಸೂರು ಭಾಗದಲ್ಲಿಯೂ ಹೆಚ್ಚು ಸ್ಥಾನ ಬರಬೇಕು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ನಾಯಕರು

ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಅಮಿತ್ ಶಾ ಎಲ್ಲಿ ಬರಲಿದ್ದಾರೋ ಅಲ್ಲಿ, ಚುನಾವಣಾ ಕಾವು ಬರಲಿದೆ. ಪಕ್ಷಕ್ಕ ಹೆಚ್ಚಿನ ಉತ್ಸಾಹ ಬರಲಿದೆ. ಹಳೆ ಮೈಸೂರು ಸಂಘಟನೆ ಯಾವ ರೀತಿ ಇರಬೇಕು, ಎಷ್ಟು ಸ್ಥಾನ ಗೆಲ್ಲಬೇಕು ಎಂದು ಚರ್ಚಿಸಿ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಧೂಳಿಪಟ ಮಾಡಿ ಬಿಜೆಪಿ ಗೆಲ್ಲಬೇಕು, ಮುಂದಿನ ತಿಂಗಳು ಮತ್ತೆ ಬರುತ್ತೇನೆ, ಹಳೆ ಮೈಸೂರು, ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ಕೊಡಲಿದ್ದೇನೆ ಎಂದಿದ್ದಾರೆ. ಸ್ಪೂರ್ತಿ ಕೊಡುವ ಸಭೆ ನಡೆದಿದ್ದು, ಒಳ್ಳೆಯ ರೀತಿಯಲ್ಲಿ ಸಭೆಯಾಗಿದೆ. ಹೊಸ ಹೊಸ ತಂತ್ರಗಳನ್ನು ಅಮಿತ್ ಶಾ ಮಾಡಿದ್ದಾರೆ. ಒಟ್ಟಾಗಿ ಒಗ್ಗಟ್ಟಾಗಿ ನಾವು ಚುನಾವಣೆ ಎದುರಿಸಲಿದ್ದೇವೆ ಎಂದರು.

ನಂತರ ಮಾತನಾಡಿಸ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಹಳೆ ಮೈಸೂರು ಭಾಗದಲ್ಲಿ 59 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲ ಇಲ್ಲದಿರುವುದೇ ಸೋಲಿಗೆ ಕಾರಣ ಆಗುತ್ತಿದೆ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ. ಪಕ್ಷವನ್ನು ಇನ್ನಷ್ಟು ಬಲ ಪಡಿಸಲು ಪ್ರಯತ್ನ ಮಾಡುತ್ತೇವೆ, ಎಲ್ಲಿ ಶಕ್ತಿಯುತವಾದ ಅಭ್ಯರ್ಥಿ ಇಲ್ಲವೋ ಅಂಥ ಕಡೆ ಗೆಲ್ಲುವ ಅಭ್ಯರ್ಥಿ ಹುಡುಕುತ್ತೇವೆ. ಗೆಲ್ಲುವ ಅಭ್ಯರ್ಥಿಯನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸುತ್ತೇವೆ. ನಮಗೆ ಗೆಲುವು ಒಂದೇ ಮಾನದಂಡ, ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳೋದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಹಾಜರಿದ್ದರು.

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ಮಂಡ್ಯ ಮತ್ತು ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ನಾಳೆ ಕೂಡ ಬೆಂಗಳೂರಿನಲ್ಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಜೆ ವೇಳೆಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿಸುವಂತೆ ಅಮಿತ್ ಶಾ ಕರೆ

Last Updated : Dec 30, 2022, 11:00 PM IST

ABOUT THE AUTHOR

...view details