ಬೆಂಗಳೂರು:ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳ ಜನರು ಕೃಷಿ ಉದ್ದೇಶಗಳಿಗೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಭೂ ಕಬಳಿಕೆ ಎಂದು ಪರಿಗಣಿಸಿ ಭೂ ಕಬಳಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ಕೈಬಿಡಲು ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ನ ಹಿರಿಯ ಸದಸ್ಯ ಹೆಚ್.ಕೆ.ಪಾಟೀಲ್ ಹಾಗೂ ಇತರ ಶಾಸಕರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಲ್ಯಾಂಡ್ ಗ್ರಾಬಿಂಗ್ ತೆಗೆಯಲು ಕಾನೂನು ತಿದ್ದುಪಡಿ ತರಲಾಗುವುದು. ಭೂ ಕಬಳಿಕೆಗೆ ಸಂಬಂಧಿಸಿದಂತೆ ಕಾನೂನು ತಂದು ಬೆಂಗಳೂರಿನಲ್ಲಿ ನ್ಯಾಯಾಲಯ ಸ್ಥಾಪಿಸಿರುವುದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.
ಕೃಷಿಗಾಗಿ ಅರಣ್ಯ ಒತ್ತುವರಿ ಮಾಡಿದವರನ್ನು ಭೂ ಕಬಳಿಕೆ ವ್ಯಾಪ್ತಿಗೆ ತರಲಾಗುತ್ತಿದೆ. ಇದರಿಂದ ನಿತ್ಯ 200-300 ರೈತರು ನ್ಯಾಯಾಲಯದಲ್ಲಿ ಕೇಸು ಎದುರಿಸುವಂತಾಗಿದೆ. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳನ್ನು ರಕ್ಷಣೆ ಮಾಡುವುದೇ ಬೇರೆ. ಭೂ ಕಬಳಿಕೆ ಮಾಡುವುದೇ ಬೇರೆ.
ಒತ್ತುವರಿ ಭೂ ಕಬಳಿಕೆ ವ್ಯಾಪ್ತಿಗೆ ಬರುವುದಿಲ್ಲ:ಈಗಾಗಲೇ ಸರ್ಕಾರ ಸೂಚನೆ ಕೊಟ್ಟಿದ್ದು, 192(ಎ) ಅಡಿಯಲ್ಲಿ ಕೃಷಿಗಾಗಿ ಮಾಡಿರುವ ಒತ್ತುವರಿ ಬಿಟ್ಟು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೂ ಕೆಲವೆಡೆ ಆ ಜಾಗದಲ್ಲಿ ಬೆಳೆದ ಬೆಳೆಯನ್ನು ನಾಶಪಡಿಸಲಾಗಿದೆ. ಆಗಿರುವ ಕೃತ್ಯವನ್ನು ಸಹಿಸಲಾಗದು. ಸೋಮವಾರ(ಮಾ.7) ಮುಂಡರಗಿ ತಾಲೂಕಿನಲ್ಲಿ ಅರಣ್ಯ ತೆರವು ಸಂದರ್ಭದಲ್ಲಿ ವಿಷ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆ ಪ್ರಕರಣದಲ್ಲಿ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದ ಅವರು, ರೈತರು ಮಾಡಿದ ಒತ್ತುವರಿ ಭೂ ಕಬಳಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಹೆಚ್.ಕೆ.ಪಾಟೀಲ್, ಪಾರಂಪರಿಕ ಅರಣ್ಯ ವಾಸಿಗಳ ಹಕ್ಕು ಜಾರಿಯಲ್ಲಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಮುಂಡರಗಿಯಲ್ಲಿ ಹಲವು ತೋಟ ನಾಶ ಮಾಡಿದ್ದಾರೆ. ನಾಶ ಮಾಡುವಾಗ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಬ್ಬ ಮಹಿಳೆ ಮೃತಪಟ್ಟು ಮತ್ತೊಬ್ಬ ಮಹಿಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದು ಜನವಿರೋಧಿ, ಕಾನೂನು ವಿರೋಧಿಯಾಗಿದೆ. ಗದಗ ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಾಗುವಳಿದಾರರ ಮೇಲೆ ಕೇಸ್ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಧಿಕಾರಿಗಳು ದರ್ಪ, ಬಲಪ್ರಯೋಗ ಮಾಡಿರುವುದನ್ನು ಖಂಡಿಸಿದರು.