ಬೆಂಗಳೂರು: ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ)ವಿಧೇಯಕ-2020 ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಈ ವಿಧೇಯಕದ ಪ್ರಕಾರ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ನಲ್ಲಿ ಮೀಸಲಾತಿ ನೀಡಲಾಗುತ್ತದೆ. ಅದರಂತೆ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನೀಡಲು ಈ ವಿಧೇಯಕ ಅನುವು ಮಾಡಲಿದೆ.
ಭಾರತದಲ್ಲಿನ 19 ರಾಷ್ಟ್ರೀಯ ಕಾನೂನು ವಿವಿಗಳು ರಾಜ್ಯ ನಿವಾಸಿಗಳಿಗೆ ಮೀಸಲಾತಿ ನೀಡುತ್ತಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ರಾಜ್ಯದ ನಿವಾಸಿಗಳಿಗೆ ಶೇ.25ರಷ್ಟು ಮೀಸಲಾತಿ ನೀಡಿದೆ. ಅದೇ ರೀತಿ ಇದೀಗ ರಾಜ್ಯದಲ್ಲೂ ಅದೇ ಮಾದರಿಯ ಮೀಸಲಾತಿ ನೀಡಲು ಸರ್ಕಾರ ವಿಧೇಯಕ ಮಂಡನೆ ಮಾಡಿದೆ.
ಬೆಂಗಳೂರಿನ ಭಾರತ ರಾಷ್ಟ್ರೀಯ ಕಾನೂನು ವಿವಿ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಮೀಸಲಾತಿ ನೀಡುತ್ತಿಲ್ಲ. ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದರು. ಈ ಹಿನ್ನೆಲೆ ಸರ್ಕಾರ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದೆ.