ಬೆಂಗಳೂರು:ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ದುಡಿದ ಆ್ಯಂಬುಲೆನ್ಸ್ ಚಾಲಕರಿಗೆ ಕಳೆದ 6 ತಿಂಗಳಿನಿಂದ ಬಿಲ್ ಆಗದ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಆ್ಯಂಬುಲೆನ್ಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಆ್ಯಂಬುಲೆನ್ಸ್ ಚಾಲಕರಿಂದ ಪ್ರತಿಭಟನೆ
ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಕರುನಾಡ ಚಾಲಕರ ಹಿತರಕ್ಷಣಾ ಸಂಘದಿಂದ ಆ್ಯಂಬುಲೆನ್ಸ್ ಚಾಲಕರು ಪ್ರತಿಭಟನೆ ನಡೆಸಿದರು.
ಕರುನಾಡ ಚಾಲಕರ ಹಿತರಕ್ಷಣಾ ಸಂಘದಿಂದ ಪ್ರತಿಭಟನೆ ನಡೆಸಿದ ಚಾಲಕರು ಬಾಕಿ ಬಿಲ್ ಕೊಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಲಕ್ಷಾಂತರ ರೂ. ಬಿಲ್ ಬಾಕಿಯಿದ್ದು, ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಕ್ಯಾಬ್ ಮತ್ತು ಟೆಂಪೊ ಟ್ರಾವೆಲರ್ಗಳನ್ನ ಬಿಬಿಎಂಪಿ ಆ್ಯಂಬುಲೆನ್ಸ್ಗಳಾಗಿ ಪರಿವರ್ತಿಸಿತ್ತು. ಜನ ಸಾಮಾನ್ಯರ ತುರ್ತು ಆ್ಯಂಬುಲೆನ್ಸ್ಗಾಗಿ ಟೂರಿಸ್ಟ್ ಗಾಡಿಗಳನ್ನೂ ಆ್ಯಂಬುಲೆನ್ಸ್ ಆಗಿ ಬದಲಾಯಿಸಲು ಚಾಲಕರು ನೀಡಿದ್ದರು. ಆದ್ರೆ ಬಿಲ್ ಮಾತ್ರ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ಸ್ಥಳಕ್ಕೆ ಕಮಿಷನರ್ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಪಾಲಿಕೆ ಅಧಿಕಾರಿಗಳು ಶೀಘ್ರ ಬಿಲ್ ಪಾವತಿ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.