ಬೆಂಗಳೂರು: ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಿರೆಮೇಗಲಗೆರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ಹರಪನಹಳ್ಳಿಯ ಅಂಬೇಡ್ಕರ್ ಯುವ ಸಂಘಟನೆಯ ಅಧ್ಯಕ್ಷ ರೇವಣ ಸಿದ್ದಪ್ಪ ಹೈಕೋರ್ಟ್ಗೆ ಮಾಹಿತಿ ನೀಡಿದರು. ಪ್ರತಿಮೆ ಸ್ಥಾಪನೆ ಆಕ್ಷೇಪಿಸಿ ಒ.ನೀಲಪ್ಪ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರೇವಣ್ಣ ಸಿದ್ದಪ್ಪ ಪರ ವಕೀಲರು ಮಾಹಿತಿ ನೀಡಿ, ಹಿರೆಮೇಗಲಗೆರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಹೈಕೋರ್ಟ್ ಆದೇಶದಂತೆ ಕಳೆದ ಮಾ.31ರಂದು ಸ್ಥಳೀಯ ಪಿಡಿಒ ಒದಗಿಸಿದ ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರಲ್ಲದೆ, ಅದಕ್ಕೆ ಸಂಬಂಧಿಸಿದ ಪೋಟೋಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರ ವಕೀಲರು, ಪ್ರತಿಮೆಯನ್ನು ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿದೆ. ಆ ಮೂಲಕ ಮತ್ತೆ ಸಾರ್ವಜನಿಕ ಸ್ಥಳದಲ್ಲಿಯೇ ಪ್ರತಿಮೆ ಸ್ಥಾಪಿಸಲಾಗಿದೆ. ಅದಕ್ಕೆ ಅನುಮತಿಯನ್ನೂ ಪಡೆದಿಲ್ಲ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಹ ಸಲ್ಲಿಸಿದ್ದು, ಪ್ರತಿಮೆ ತೆರವುಗೊಳಿಸಲು ಕೋರಿದೆ ಎಂದು ಪೀಠಕ್ಕೆ ವಿವರಿಸಿದರು.