ಬೆಂಗಳೂರು : ಬಿಬಿಎಂಪಿ ವತಿಯಿಂದ ಅದ್ಧೂರಿಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ ನಗರದ 8 ವಲಯಗಳಿಂದ ಪೌರಕಾರ್ಮಿಕರು ಜನಪದ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಬಂದರು. ಕಾರ್ಯಕ್ರಮದಲ್ಲಿ ನಿವೃತ್ತಿಯ ಸಮೀಪದಲ್ಲಿರುವ ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರ ಸಿದ್ಧಾಂತವನ್ನು ನಾವು ಸಂವಿಧಾನದ ಮೂಲಕ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಪೌರಕಾರ್ಮಿಕರಿಂದ ಜನಪ್ರತಿನಿಧಿಗಳು ನೆಮ್ಮದಿಯಾಗಿ ಬದುಕಬಹುದಾಗಿದೆ ಎಂದರು.
ವಿಪಕ್ಷ ನಾಯಕ, ಅಬ್ದುಲ್ ವಾಜಿದ್ ಮಾತನಾಡಿ, ಚುನಾವಣೆಯಿಂದ ಅಂಬೇಡ್ಕರ್ ದಿನಾಚರಣೆ ಮುಂದೂಡಲಾಗಿತ್ತು. ಶೋಷಿತರು, ಕೆಳವರ್ಗದವರಿಗೂ ಅಧಿಕಾರ ಕೊಟ್ಟಿದ್ದು, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ. ಎಲ್ಲೋ ಕೆಲವರು, ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ. ಅದನ್ನು ನಾವು ಬಿಡುವುದಿಲ್ಲ ಎಂದರು.
ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, ಪೌರಕಾರ್ಮಿಕರ ಬೇಡಿಕೆಯಂತೆ, ವರ್ಷಕ್ಕೆ ಎರಡು ಸಾವಿರ ಬೋನಸ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ತಕ್ಷಣ ನಿರ್ಧಾರಕ್ಕೆ ಬರಲಾಗುವುದು. ಪೌರಕಾರ್ಮಿಕರ ಕೆಲಸದಿಂದಾಗಿ ಇಂದು ಈ ನಗರದಲ್ಲಿ ಬದುಕಬಹುದಾಗಿದೆ. ಶಿಕ್ಷಣ, ಹೋರಾಟ, ಸಂಘಟನೆ ಇಂದಿಗೂ ಪ್ರಸ್ತುತ. ಇನ್ನು ನಮ್ಮ ಜನಾಂಗದ ಜನ ಶಿಕ್ಷಿತರಾಗಿಲ್ಲ, ಸಂಘಟಕರೂ ಆಗಿಲ್ಲ. ಹಾಗಾಗಿ ಇಂದಿಗೂ ಈ ಸಂದೇಶಗಳು ಅನ್ವಯ ಎಂದರು.