ಬೆಂಗಳೂರು: ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಬಳಿ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಇದೇ ವರ್ಷ ನಟ ದಿ ಪುನಿತ್ ರಾಜ್ಕುಮಾರ್ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಇದರ ಜೊತೆಗೆ ಅಂಬರೀಶ್ ಅವರ ಸ್ಮಾರಕ ಸಿದ್ಧವಾಗುತ್ತಿದೆ. ಮಾರ್ಚ್ 27 ರಂದು ಸ್ಮಾರಕ ಹಾಗೂ ರೇಸ್ ಕೋರ್ಸ್ಗೆ ಹೆಸರಿಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಈ ಬಾರಿಯ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಬಾರಿ ಉತ್ತಮ ಚಿತ್ರಗಳ ಆಯ್ಕೆಯಾಗಿದೆ. ಈ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಬೆಂಗಳೂರು ಅಂತರಾಷ್ಟ್ರೀಯ ನಗರ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಬರುತ್ತಾರೆ. 400 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬೆಳೆದಿದೆ. ಇಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಯದೆ ಇನ್ನೆಲ್ಲಿ ನಡೆಯುತ್ತದೆ ಎಂದರು.
ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ:ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನೆಮಾ ನೋಡುವುದಕ್ಕೂ ವ್ಯತ್ಯಾಸ ಇದೆ. ಸಿನೆಮಾಗೆ ಬಹಳ ದೊಡ್ಡ ಇತಿಹಾಸ ಇದೆ. ಅತ್ಯಂತ ಅದ್ಭುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈಗ ತಂತ್ರಜ್ಞಾನದ ಮೂಲಕ ಹೋದರೆ ಯಶಸ್ಸು ಸಿಗುತ್ತದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿರುವುದರಿಂದ ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ ಎಂದರು.