ಬೆಂಗಳೂರು : ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನಾನು ಪಕ್ಷದಲ್ಲಿ ಹಿರಿಯನಿದ್ದೇನೆ ಎಂದು ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ ಆಧಾರಿಸಿ ನನಗೂ ಕೂಡ ಸಚಿವ ಸ್ಥಾನ ಕೊಡಬೇಕು. ಈ ವಿಚಾರವಾಗಿ ಕಾಂಗ್ರೆಸ್ ನಾಯಕರ ಬಳಿ ಚರ್ಚೆ ಮಾಡಿದ್ದೇನೆ. ಇವತ್ತು ಸಿಎಂ ಜತೆ ಕ್ಷೇತ್ರದ ಅನುದಾನದ ಕುರಿತು ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ಸಿಎಂ ಕುಮಾರಸ್ವಾಮಿ ಬಗ್ಗೆ ಈ ಹಿಂದೆ ಅಸಮಾಧಾನ ಹೊರಹಾಕಿದ್ದ ವಿಷಯವಾಗಿ ಪ್ರತಿಕ್ರಿಯಿಸಿದ ಮುನಿಯಪ್ಪ, ಹಿಂದೆ ಮಾತನಾಡಿದ್ದೆ. ಆದರೆ, ಈಗ ಮೈತ್ರಿ ಸರ್ಕಾರದಲ್ಲಿ ಇದ್ದೇವೆ. ಸರ್ಕಾರ ರಚನೆಯಾದ ಹೊಸತರಲ್ಲಿ ಸಿದ್ದರಾಮಯ್ಯ ಹತ್ತಿರ ಸಿಎಂ ಕುಮಾರಸ್ವಾಮಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ ಎಂದರು.
ಸಿಎಂ ಭೇಟಿಯಾದ ಶಾಸಕ ವಿ.ಮುನಿಯಪ್ಪ ಕುತೂಹಲ ಮೂಡಿಸಿದ ಸಿಎಂ ಭೇಟಿ :
ವಿ.ಮುನಿಯಪ್ಪರನ್ನು ಸಿಎಂ ಕರೆಸಿಕೊಂಡು ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗಿರುವ ಕುಮಾರಸ್ವಾಮಿ, ಅಸಮಾಧಾನಿತ ಶಾಸಕರ ಜೊತೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಒಬ್ಬೊಬ್ಬರನ್ನೇ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ಶಾಸಕ ನಾಗೇಶ್ ಸಹ ಇಂದು ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಷರತ್ತು ವಿಧಿಸಿದ ಅತೃಪ್ತ ಶಾಸಕರು :
ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಾಧಾನ ಪಡಿಸಲು ಮುಂದಾಗಿರುವ ಮುಖ್ಯಮಂತ್ರಿಗಳಿಗೆ ಕೆಲವರು ಷರತ್ತುಗಳನ್ನು ವಿಧಿಸಲಾರಂಭಿಸಿದ್ದಾರೆ. ಸಂಪುಟ ಪುನಾರಚನೆಯ ಚರ್ಚೆಗಳು ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್‍ನ ಅಜಯ್‍ಸಿಂಗ್, ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ ಮತ್ತಿತರರು ತಮಗೂ ಸಂಪುಟದಲ್ಲಿ ಅವಕಾಶ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.