ಬೆಂಗಳೂರು:ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಾಳೆ ಬೆಂಗಳೂರು ವಕೀಲರ ಸಂಘದ ಚುನಾವಣೆ ನಡೆಯಲಿದ್ದು, ಈ ವೇಳೆ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಪ್ರಮುಖ ಮಾರ್ಗಗಳಲ್ಲಿ ನಗರ ಸಂಚಾರಿ ಪೊಲೀಸರು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗದ (ಹಳೆ ಅಂಚೆ ಕಚೇರಿ) ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಸಿಟಿ ಸಿವಿಲ್ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ವಕೀಲರ ಸಂಘದ ಚುನಾವಣೆಗೆ ಮತ ಹಾಕಲು ಬರುವ ವಕೀಲರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಸಾರ್ವಜನಿಕರ ವಾಹನಗಳು ಸಾಗಬೇಕಾದ ಮಾರ್ಗ:
ಸಿಟಿ ಸಿವಿಲ್ ಕೋರ್ಟ್ ಮುಂಭಾಗದ ರಸ್ತೆಯು ಬಂದ್ ಆಗಿರಲಿದೆ. ಹೀಗಾಗಿ ಶೇಷಾದ್ರಿ ರಸ್ತೆಯಿಂದ ಮೈಸೂರು ಬ್ಯಾಂಕ್ ಸರ್ಕಲ್ ಕಡೆಗೆ ಹೋಗುವ ವಾಹನಗಳು, ಕೆ.ಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಸಂಚರಿಸಿ ಪೊಲೀಸ್ ಕಾರ್ನರ್‌ನಲ್ಲಿ ಬಲ ತಿರುವು ಪಡೆದುಕೊಂಡು ಕೆ.ಜಿ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಮುಂದುವರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಕೆ.ಆರ್ ಸರ್ಕಲ್ ಕಡೆಗೆ ಹೋಗುವ ವಾಹನಗಳು, ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿನ ಪ್ಯಾಲೇಸ್ ರಸ್ತೆಯಲ್ಲಿ ಸಂಚರಿಸಿ, ಮಹಾರಾಣಿ ಕಾಲೇಜ್ ಅಪ್‌ರಾಪ್ ಮೇಲೆ ಎಡ ತಿರುವು ಪಡೆದುಕೊಂಡು ಮುಂದೆ ಸಾಗಿ ಫ್ರೀಡಂ ಪಾರ್ಕ್ ಜಂಕ್ಷನ್‌ನಲ್ಲಿ ಯು-ಟರ್ನ್ ಪಡೆದುಕೊಂಡು ಶೇಷಾದ್ರಿ ರಸ್ತೆಯ ಮೂಲಕ ಕೆ.ಆರ್ ಸರ್ಕಲ್ ತಲುಪಿ ಮುಂದುವರಿಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತೆ ಶವ ಪತ್ತೆ: ಅತ್ಯಾಚಾರ, ಕೊಲೆ ಆರೋಪ