ಕರ್ನಾಟಕ

karnataka

ETV Bharat / state

5 ಗುಂಟೆಯೊಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನೋಂದಣಿಗೆ ಅವಕಾಶ: ಸಚಿವ ಕೃಷ್ಣಬೈರೇಗೌಡ - ಮನೆ ಕಟ್ಟಿಕೊಳ್ಳಲು ಅವಕಾಶ

''ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು ಹಾಗೂ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ'' ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Krishnabhairegowda
ಸಚಿವ ಕೃಷ್ಣಬೈರೇಗೌಡ

By

Published : Jul 10, 2023, 9:40 PM IST

ಬೆಂಗಳೂರು:ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ಬೇಲೂರು ಕ್ಷೇತ್ರದ ಶಾಸಕ ಎಚ್. ಕೆ. ಸುರೇಶ್ ಪ್ರಶ್ನೆ ಕೇಳಿದರು, ''ರಾಜ್ಯದಲ್ಲಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಗ್ರಾಮ ಠಾಣೆ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿರುವ 5 ಗುಂಟೆ ಒಳಗಿನ ಭೂಮಿಯಲ್ಲಿ ಗೃಹನಿರ್ಮಾಣಕ್ಕೆ ಮತ್ತು ನೋಂದಣಿಗೆ ಅವಕಾಶ ನೀಡುತ್ತಿಲ್ಲ'' ಎಂದು ಆಕ್ಷೇಪಿಸಿದರು.

ಇದಕ್ಕೆ ಹಲವು ಸಚಿವರು ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ ಅವರು, ''5 ಗುಂಟೆ ಒಳಗಿನ ಕಂದಾಯ ಭೂಮಿಯನ್ನು ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ನೋಂದಣಿಗೆ ನಿರ್ಬಂಧಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಈ ರೀತಿಯ ಸಣ್ಣ ಸಣ್ಣ ಪ್ರಮಾಣದ ಭೂಮಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿ ಸೌಲಭ್ಯ ಇಲ್ಲದೇ ಇರುವಾಗ ಜನ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಈ ಕಾರಣಕ್ಕಾಗಿ 2021ರಲ್ಲಿ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ'' ಎಂದು ತಿಳಿಸಿದರು.

''ಆದರೆ, ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ಕಡಿಮೆ ಪ್ರಮಾಣದ ಭೂಮಿ ನೋಂದಣಿಯಗಲಿದೆ. ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಎಲ್ಲಿಯಾದರೂ ಈ ರೀತಿಯ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ, ಸರಿಪಡಿಸಿ ಕೋಡುತ್ತೇವೆ'' ಎಂದು ಭರವಸೆ ನೀಡಿದರು.

ಮನೆ ಹಂಚಿಕೆಯಲ್ಲಿ ಅನರ್ಹರನ್ನು ಪರಿಗಣಿಸಲಾಗಿರುವ ಬಗ್ಗೆ ಮರು ಪರಿಶೀಲನೆ: ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಮನೆ ಹಂಚಿಕೆಯಲ್ಲಿ ಅನರ್ಹರನ್ನು ಪರಿಗಣಿಸಲಾಗಿರುವ ಬಗ್ಗೆ ಮರು ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಶ್ನೋತ್ತರ ವೇಳೆ ಧಾರವಾಡ ಕ್ಷೇತ್ರದ ವಿನಯ್ ಕುಲಕರ್ಣಿ ಅವರ ಪ್ರಶ್ನೆಗೆ ಉತ್ತರಿಸಿದರು.

''ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 973 ಮನೆಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ಅನರ್ಹರು ಸೇರ್ಪಡೆಯಾಗಿರುವ ಬಗ್ಗೆ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ 783 ಮಂದಿ ಅರ್ಹರನ್ನು ಗುರುತಿಸಿ ಉಳಿದ 230 ಅನರ್ಹರನ್ನು ವಜಾಗೊಳಿಸಲಾಗಿದೆ. ಈಗ ಮತ್ತೆ ಶಾಸಕರು ಪುನರ್ ಪರಿಶೀಲನೆ ಮತ್ತು ಮರು ತನಿಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.

ಅನುದಾನ ಬಿಡುಗಡೆಗೆ ಆಗ್ರಹ:ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ನೀಡಲಾಗಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮಾಗಡಿ ಕ್ಷೇತ್ರದ ಶಾಸಕ ಎಚ್‍ಸಿ ಬಾಲಕೃಷ್ಣ ಒತ್ತಾಯಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ''ಹಿಂದಿನ ಸರ್ಕಾರ ಕ್ಷೇತ್ರದಲ್ಲಿನ ದೇವಸ್ಥಾನದ ಅಭಿವೃದ್ಧಿಗೆ 5 ಕೋಟಿ ರೂ.ಗಳನ್ನು ನೀಡಿದ್ದು, ಆದರೆ ಇದ್ದಕ್ಕಿದ್ದಂತೆ ಅದನ್ನು ಹಿಂಪಡೆಯಲಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರವಾಸೋಧ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು ಎಂದು ಸ್ಪಷ್ಟಪಡಿಸಿದರು. ಧಾರ್ಮಿಕ ದತ್ತಿ ಸಚಿವ ರಾಮಲಿಂಗರೆಡ್ಡಿ ಅವರ ಪರವಾಗಿ ಉತ್ತರ ನೀಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಕಳೆದ 3 ವರ್ಶದಲ್ಲಿ ಮಾಗಡಿ ಕ್ಷೇತ್ರದ ದೇವಸ್ಥಾನದ ಅಭಿವೃದ್ಧಿಗೆ 3.18 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಒದಗಿಸಲಾದ ಅನುದಾನದ ಬಗ್ಗೆ ಸಚಿವರ ಜೊತೆಗೆ ಚರ್ಚಿಸಿ ಕ್ರಮದ ಭರವಸೆ ನೀಡಿದರು.

ಇದನ್ನೂ ಓದಿ:ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ: ಡಿ.ಕೆ ಶಿವಕುಮಾರ್

ABOUT THE AUTHOR

...view details