ಬೆಂಗಳೂರು :ರಾಜ್ಯ ಗಡಿ ವಿಚಾರವಾಗಿ ಕೈಗೊಂಡ ತೀರ್ಮಾನಕ್ಕೆ ಬದ್ಧವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯತ್ತಿರುವ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ನಿಯಮ 59 ರ ಅಡಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಯಿಸಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದ ಸಂದರ್ಭ ವಿವರಣೆ ನೀಡಿದರು.
ಕೇಂದ್ರ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದೆ. ತ್ರಿಬಲ್ ಎಂಜಿನ್ ಸರ್ಕಾರ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಗಡಿ ವಿವಾದದ ಹಿಂದೆ ಚುನಾವಣಾ ರಾಜಕೀಯ ಇದೆ ಎನ್ನುವ ಭಾವನೆ ನಮಗಿದೆ. ಇದರಿಂದ ಈ ಗಡಿ ವಿವಾದವಾಗಿ ಸುದೀರ್ಘ ಚರ್ಚೆ ನಡೆಯಬೇಕೆಂದು ಮನವಿ ಮಾಡಿದರು. ಇದಕ್ಕೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಸಹ ಈ ವಿಚಾರವಾಗಿ ಚರ್ಚೆ ನಡೆಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದೊಂದು ಸೂಕ್ಷ್ಮ ವಿಚಾರ. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈಗ ಚರ್ಚೆ ಮಾಡುವುದು ಸಮಂಜಸವಲ್ಲ ಎಂದರು. ಹರಿಪ್ರಸಾದ್ ಮಾತನಾಡಿ, ಕರ್ನಾಟಕ ಬಿಜೆಪಿಯ ಆಸ್ತಿಯಲ್ಲ. ನಾವು ನಾಡಿನ ನೆಲ, ಜಲ ವಿಚಾರವಾಗಿ ಈ ಸೂಕ್ಷ್ಮ ಚರ್ಚೆ ನಡೆಸಬೇಕಿದೆ. ಇದರಿಂದ ನಿಯಮ 68 ರ ಅಡಿ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥ್ ರಾವ್ ಮಲ್ಕಾಪುರೆ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಇಲ್ಲದ ಹಿನ್ನೆಲೆ ಅವರ ಉಪಸ್ಥಿತಿಯಲ್ಲಿ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಭರವಸೆ ಕೊಟ್ಟರು. ಇದಾದ ಬಳಿಕ ವಿವಿಧ ಇಲಾಖೆಯ ಕಾಗದ ಪತ್ರಗಳನ್ನು ಸಚಿವ ಎಸ್.ಟಿ. ಸೋಮಶೇಖರ್ ಮಂಡಿಸಿದರು. ಈ ವೇಳೆ ಯಾವ ಕಾಗದ ಪತ್ರಗಳು ಅನ್ನುವುದನ್ನು ನಮಗೆ ತಿಳಿಸಿಕೊಡಿ. ನಿಮ್ಮ ಪಾಡಿಗೆ ನೀವು ಮಂಡಿಸಿದರೆ ಹೇಗೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ವಿವರವನ್ನು ನೀಡುವುದಾಗಿ ಸಭಾಪತಿಗಳು ಗಮನ ಸೆಳೆಯುವ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡಿದರು. ಜೆಡಿಎಸ್ ಸದಸ್ಯ ಗೋವಿಂದರಾಜು ಕೋಲಾರ ಉಪನೋಂದಣಾಧಿಕಾರಿ ಕಚೇರಿ ಸಮಸ್ಯೆ ವಿಚಾರವಾಗಿ ಪ್ರಶ್ನೆ ಎತ್ತಿದರು. ಇದಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಲಿಖಿತ ಉತ್ತರ ಮಂಡಿಸಿದರು.
ಇದನ್ನೂ ಓದಿ :ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ.. ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ