ಬೆಂಗಳೂರು: ಗಣೇಶ ಉತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ ನಡೆಸಲು ಅವಕಾಶ ಕೊಡಿ. ಇಲ್ಲವೇ ಆರ್ಕೆಸ್ಟ್ರಾ ಕಲಾವಿದರಿಗೆ ವಿಷ ಕೊಟ್ಟು ಬಿಡಿ ಎಂದು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.
ಆರ್ಕೆಸ್ಟ್ರಾ ನಡೆಸಲು ಅನುಮತಿ ಕೊಡಿ, ಇಲ್ಲವೇ ವಿಷ ಕೊಟ್ಟು ಸಾಯಿಸಿ: ಕಲಾವಿದರ ಆಕ್ರೋಶ ಕೊರೊನಾ ಲಾಕ್ಡೌನ್ ನಂತರ ಸರ್ಕಾರ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಅದರೆ ಥಿಯೇಟರ್ ಹಾಗೂ ಆರ್ಕೆಸ್ಟ್ರಾದಂತಹ ಸಂಗೀತ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಇದರಿಂದ ವಾದ್ಯಗೋಷ್ಠಿ ಕಲಾವಿದರು ಹಾಗೂ ನೃತ್ಯ ಕಲಾವಿದರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಆರ್ಕೆಸ್ಟ್ರಾ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂದು ಮೌರ್ಯ ಸರ್ಕಲ್ನಲ್ಲಿ ಗಣೇಶ ಮೂರ್ತಿಗಳ ಸಮೇತ ಬಂದು ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಕಲಾವಿದರು, ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆರ್ಕೆಸ್ಟ್ರಾ ಕಲಾವಿದರು ಹಾಗೂ ನೃತ್ಯ ಕಲಾವಿದರಾದ ನಾವು ಸುಮಾರು 40 ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬರುತ್ತಿದ್ಧೇವೆ. ನಾವು ಯಾವತ್ತೂ ಸರ್ಕಾರದ ಸಹಾಯ ಕೇಳಿಲ್ಲ. ಅಲ್ಲದೆ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಎಲ್ಲಾ ವರ್ಗದವರಿಗೆ ದಿನಸಿ ಕಿಟ್ ನೀಡಿದೆ ಹಾಗೂ ಕೆಲವರಿಗೆ ಐದು ಸಾವಿರ ಪರಿಹಾರದ ಹಣ ಕೂಡ ನೀಡಿದೆ. ಅದರೆ ಸರ್ಕಾರಕ್ಕೆ ನಮ್ಮ ಆರ್ಕೆಸ್ಟ್ರಾ ಕಲಾವಿದರು ಕಾಣಿಸಲಿಲ್ಲವೇ? ನಾವು ಈಗಲೂ ಸರ್ಕಾರಕ್ಕೆ ಸಹಾಯ ಮಾಡಿ ಎಂದು ಕೇಳುತ್ತಿಲ್ಲ. ನಮಗೆ ಆರ್ಕೆಸ್ಟ್ರಾ ನಡೆಸಲು ಅವಕಾಶ ನೀಡಿ. ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನಡೆಸುತ್ತೇವೆ ಎಂದು ಆಗ್ರಹಿಸಿದರು.
ಇಷ್ಟಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಮುಂದೆ ಆಗುವ ಸಾವು-ನೋವುಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಆರ್ಕೆಸ್ಟ್ರಾ ಕಲಾವಿದರ ಸಂಘ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಸದ್ಯ ಗಣೇಶ ಹಬ್ಬದ ಸೀಸನ್ ನಮಗೆ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಿ ಎಂದು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಶಂಕರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.