ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು, ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ಪಾಸ್ ವಿತರಣೆವರೆಗೂ ಕಳೆದ ಸಾಲಿನ ಪಾಸ್ ಅಥವಾ ಶಾಲಾ ಕಾಲೇಜುಗಳಿಗೆ ದಾಖಲಾದ ಕುರಿತು ಪಾವತಿಸಿರುವ ಶುಲ್ಕದ ರಸೀದಿ ತೋರಿಸಿ ಕೆಎಸ್ಆರ್‌ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2023-24ನೇ ಸಾಲಿನ ವಿದ್ಯಾರ್ಥಿ ಉಚಿತ ಹಾಗೂ ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದ್ದು, ಇಡಿಸಿಎಸ್ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಪಾಸು ಪಡೆಯಲು ಕಾಲಾವಕಾಶ ನೀಡಬೇಕಿರುತ್ತದೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ಕ್ರಮ ವಹಿಸಬೇಕಿರುತ್ತದೆ.
ಈ ಸಂಬಂಧ ವಿದ್ಯಾರ್ಥಿಗಳಿಗೆ ದಿನಾಂಕ 15-06-2023 ರವರೆಗೆ ಪ್ರಸಕ್ತ ವರ್ಷದಲ್ಲಿ ಶಾಲಾ ಹಾಗೂ ಕಾಲೇಜುಗಳಿಗೆ ದಾಖಲಾಗಿರುವ ಸಂಬಂಧದ ಶುಲ್ಕ ಪಾವತಿ ರಸೀದಿ ಅಥವಾ 2022-23ನೇ ಸಾಲಿನ ವಿದ್ಯಾರ್ಥಿ ಬಸ್‌ಪಾಸ್ ದಾಖಲೆಗಳನ್ನು ನಿಗಮದ ಬಸ್ಗಳಲ್ಲಿ ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಬಿಎಂಟಿಸಿ ಪಾಸ್ ಅವಧಿ ವಿಸ್ತರಣೆ:ಬಿಎಂಟಿಸಿ ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ, ಜೂನ್ 15ರ ವರೆಗೂ ಹಳೆಯ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ. 12ನೇ ತರಗತಿ ವರೆಗಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ, ಹಿಂದಿನ ವರ್ಷದ ಪಾಸನ್ನೇ ಬಸ್ಗಳಲ್ಲಿ ತೋರಿಸಿ ಪ್ರಯಾಣ ಮಾಡಬಹುದು. ಪಾಸ್ ಇಲ್ಲದಿದ್ದರೆ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿದರೆ ಪ್ರಯಾಣಿಸಬಹುದು. ಜೂನ್ 15ರವರೆಗೂ ಬಿಎಂಟಿಸಿ ಈ ಸೇವೆ ಒದಗಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆ ಪ್ರಾರಂಭ: ಶೈಕ್ಷಣಿಕ ವರ್ಷ ಆರಂಭವಾದ ಮೇ 29ರಿಂದಲೇ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆರಂಭಗೊಂಡಿವೆ. ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳು ಪ್ರಾರಂಭವಾಗಿವೆ. ಶಾಲಾ ಆರಂಭಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, 1ರಿಂದ 10ನೇ ತರಗತಿವರೆಗೂ ಮೊದಲ ದಿನದಿಂದಲೇ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶನ ಕೊಟ್ಟಿದೆ. ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62,229 ಶಾಲೆಗಳು ರಾಜ್ಯದಲ್ಲಿವೆ. ಇದರಲ್ಲಿ 25,278 ಕಿರಿಯ ಪ್ರಾಥಮಿಕ ಶಾಲೆಗಳಿವೆ. ಹಿರಿಯ ಪ್ರಾಥಮಿಕ ಶಾಲೆಗಳು 36,951 ಹಾಗೂ 15,867 ಮಾಧ್ಯಮಿಕ ಶಾಲೆಗಳು ಇವೆ.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಆಗಮಿಸಿ ಕೆಲವು ಹಿರಿಯ ತರಗತಿ ಮಕ್ಕಳು, ಪೋಷಕರ ಸಹಕಾರದೊಂದಿಗೆ ಕಳೆದ ಒಂದೆರಡು ದಿನಗಳಿಂದ ಶಾಲೆ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಆಡಳಿತ ಮಂಡಳಿಯು ಶಾಲೆಗಳಲ್ಲಿ ತರಗತಿ ಆರಂಭಕ್ಕೆ ಬೇಕಾಗಿರುವ ವ್ಯವಸ್ಥೆಗಳನ್ನು ಮಾಡಿದೆ. ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ 1ರಿಂದ 3ನೇ ತರಗತಿಗೆ ಪ್ರಾರಂಭದ 30 ದಿನಗಳು ಮತ್ತು 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳವರೆಗೆ ಕಾಲ ಸೇತುಬಂಧ ಕಾರ್ಯಕ್ರಮ ಆಯೋಜಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ.
ಮಕ್ಕಳಲ್ಲಿ ಕಲಿಕಾ ಅಂತರವನ್ನು ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಂಡಿದೆ. ಶಿಕ್ಷಣದ ಸಾಹಿತ್ಯ ಹಾಗೂ ವಿನ್ಯಾಸ ಸಿದ್ಧಪಡಿಸಿ ಇಲಾಖೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶಾಲಾ ಹಂತದಲ್ಲಿ ಸೇತುಬಂಧ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯ ಸಿದ್ಧಪಡಿಸಲಾಗಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟ ಮತ್ತು ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಹಾಗೂ ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವಂತೆ ಮಾಡುವುದು ಈ ಸೇತು ಬಂಧ ಶಿಕ್ಷಣದ ಉದ್ದೇಶವಾಗಿದೆ.
ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದು ಹೀಗೆ..