ಬೆಂಗಳೂರು :ಬಡತನದ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸರಿಯಲ್ಲ. ಹೀಗಾಗಿ, ಬಡಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸ್ಮಾರ್ಟ್ಫೋನ್, ಟ್ಯಾಬ್ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಮೂಲಕ ಬಡ ಮಕ್ಕಳು ನಿರಾತಂಕವಾಗಿ ಕಲಿಕೆ ಮುಂದುವರೆಸಲು ಸರ್ಕಾರ ಉಚಿತವಾಗಿ ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಟ್ಯಾಬ್, ಇಂಟರ್ನೆಟ್ ಮತ್ತಿತರೆ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ಅನುದಾನ ಮೀಸಲಿಡಲು ಸೂಚನೆ ನೀಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಲಿಖಿತ ವರದಿ ಸಲ್ಲಿಸಿ, ಕೋವಿಡ್ನಿಂದಾಗಿ ಸಾಕಷ್ಟು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಶೇ.30ರಷ್ಟು ವಿದ್ಯಾರ್ಥಿಗಳು ತಾಂತ್ರಿಕ ಸೌಲಭ್ಯಗಳಾದ ಮೊಬೈಲ್, ಲ್ಯಾಪ್ಟಾಪ್ ಹಾಗೂ ಇಂಟರ್ನೆಟ್ನಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲ.
ಚಿತ್ರದುರ್ಗ, ಬೀದರ್, ಕಲಬುರಗಿ, ತುಮಕೂರು, ಕೊಪ್ಪಳ, ಜಿಲ್ಲೆಗಳಲ್ಲಿ ಶೇ.35ರಷ್ಟು ಶಾಲಾ ಮಕ್ಕಳು ಈ ಸೌಲಭ್ಯ ಹೊಂದಿಲ್ಲ. ಹಾಗೆಯೇ, ಬೆಂಗಳೂರು ಗ್ರಾಮಾಂತರ, ಉಡುಪಿ, ದ. ಕನ್ನಡ ಹಾಗೂ ಉ. ಕನ್ನಡ ಜಿಲ್ಲೆಗಳಲ್ಲಿ ಶೇ.15ರಷ್ಟು ಮಕ್ಕಳ ಬಳಿ ತಾಂತ್ರಿಕ ಪರಿಕರಗಳಿಲ್ಲ. ಚಾಮರಾಜನಗರದಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಶೇ.40ರಷ್ಟು ಮಕ್ಕಳ ಬಳಿ ತಾಂತ್ರಿಕ ಸೌಲಭ್ಯಗಳಿಲ್ಲ ಎಂದು ತಿಳಿಸಿದರು.
ಈ ವರದಿಯನ್ನು ಪರಿಶೀಲಿಸಿದ ಪೀಠ, ಆರ್ಥಿಕವಾಗಿ ಹಿಂದುಳಿದ ಕಾರಣಕ್ಕಾಗಿ ಅಥವಾ ಬಡತನದ ಕಾರಣಕ್ಕಾಗಿ ಮಕ್ಕಳ ಶಿಕ್ಷಣ ಸ್ಥಗಿತಗೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ದೂರದರ್ಶನದ ಮೂಲಕ ಶಿಕ್ಷಣ ನೀಡುತ್ತಿರುವುದಾಗಿ ಸರ್ಕಾರ ಹೇಳಿದ್ದರೂ, ಅದು ಪರಿಪೂರ್ಣವಲ್ಲ. ಹೀಗಾಗಿ, ಕೋವಿಡ್ ಬಿಕ್ಕಟ್ಟಿನ ಹೊರತಾಗಿಯೂ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು.
ಬಡ ಮಕ್ಕಳ ಶಿಕ್ಷಣಕ್ಕೆ ಇಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಬಡತನ ರಾಜ್ಯಕ್ಕಿಲ್ಲ. ಹೀಗಾಗಿ, ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಖರೀದಿಸಿ ಕೊಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಹಾಗೆಯೇ, ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಸರ್ಕಾರ ಸೂಕ್ತ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.
ಓದಿ:ಮೆಟ್ರೋ ಕಾಮಗಾರಿಗೆ ಮರ ಕಡಿಯಲು ಹೈಕೋರ್ಟ್ ಸಮ್ಮತಿ : ನಾಲ್ಕು ಸಾವಿರ ಗಿಡ ನೆಡಲು ಷರತ್ತು