ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಡಿಕೆಶಿ ಅವರ ಇಚ್ಚೆಯಂತೆ 335, 336, 337, 337 A ಸಂಖ್ಯೆಯ ಉತ್ತರ ದಿಕ್ಕಿನಲ್ಲಿರುವ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಒಳಗೊಂಡಂತೆ ಮತ್ತೆ ಮೂವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಯಿತು. ಒಬ್ಬರು ಸಚಿವರಿಗೆ ನಾಲ್ಕು ಕೊಠಡಿ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಕಳೆದ ಬಾರಿ ಸಚಿವರಾಗಿದ್ದಾಗಲೂ ಡಿಕೆಶಿಗೆ 335 ಮತ್ತು 336 ಕೊಠಡಿ ನೀಡಲಾಗಿತ್ತು. ಈ ಬಾರಿಯೂ ಅದೇ ಕೊಠಡಿಯನ್ನು ಅವರು ಕೇಳಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ, ಅದರ ಪಕ್ಕದ ಎರಡು ಕೊಠಡಿಗಳನ್ನೂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಓರ್ವ ಸಚಿವರಿಗೆ ಎರಡು ಖಾತೆಗಳಿದ್ದರೂ ಎರಡು ಕೊಠಡಿ (ಸಚಿವರ ಚೇಂಬರ್ ಹಾಗೂ ಪಕ್ಕದ ಸಚಿವರ ಸಿಬ್ಬಂದಿ ಕೊಠಡಿ) ಹಂಚಲಾಗುತ್ತದೆ. ಆದರೆ, ಈ ಸಲ ಡಿಕೆಶಿಗೆ ನಾಲ್ಕು ಕೊಠಡಿ ಹಂಚಿರುವ ಬೆಳವಣಿಗೆ ಹುಬ್ಬೇರಿಸಿದೆ.
ಉಳಿದಂತೆ, ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 327 ಮತ್ತು 327 ಎ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 329 ಮತ್ತು 329 ಎ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆ ಮೂವರು ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿತ್ತು. ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 317 ಮತ್ತು 317 ಎ ಮತ್ತು ಎಂ.ಬಿ.ಪಾಟೀಲ್ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 344 ಮತ್ತು 344 ಎ ಹಾಗೂ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ಅವರಿಗೆ ವಿಕಾಸ ಸೌಧದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 143 ಮತ್ತು 146 ಹಂಚಿ ಸರ್ಕಾರ ಆದೇಶ ಹೊರಡಿಸಿತ್ತು.