ಬೆಂಗಳೂರು: ದೇಶದ ಯಾವುದೇ ರಾಜ್ಯದಲ್ಲಿ ಇತರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದ ಹಿನ್ನೆಲೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು, ಸಣ್ಣ ಪಕ್ಷವಾಗಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಇದೀಗ ಮೈತ್ರಿ ಸರ್ಕಾರ ಪತನದ ನಂತರ ನಿಧನವಾಗಿ ಮೈತ್ರಿ ಮುರಿದುಕೊಳ್ಳುವ ಯತ್ನ ಮಾಡುತ್ತಿದೆ.
ಕಾಂಗ್ರೆಸ್ ಕಳೆದುಕೊಂಡಿರುವ 14ರ ಜತೆ ಜೆಡಿಎಸ್ ಕಳೆದುಕೊಂಡಿರುವ 3 ಕ್ಷೇತ್ರಕ್ಕೂ ಕೈ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ವಿಶೇಷ ಅಂದರೆ ಇದರಲ್ಲಿ ಕೆಲ ಕ್ಷೇತ್ರಗಳಿಗೆ ಜೆಡಿಎಸ್ನಿಂದಲೇ ಅಭ್ಯರ್ಥಿಗಳನ್ನು ಕರೆತರುವ ಯತ್ನ ಆರಂಭವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಜೆಡಿಎಸ್ ನಾಯಕರಾಗಿರುವ ಆಂಜಿನಪ್ಪ ಹಾಗೂ ಹೊಸಕೋಟೆಯಿಂದ ಜೆಡಿಎಸ್ ಮುಖಂಡ ಮಂಜುನಾಥ ಗೌಡರನ್ನು ಕಣಕ್ಕಿಳಿಸುವ ಯತ್ನ ನಡೆದಿದೆ. ಇತರೆ ಕ್ಷೇತ್ರಗಳಲ್ಲೂ ಇದು ಮರುಕಳಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭೆಯಲ್ಲಿ ಮೊದಲ 78 ಹಾಗೂ ತಡೆಹಿಡಿದು ನಂತರ ನಡೆದ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಬರೋಬ್ಬರಿ 80 ಶಾಸಕರನ್ನು ಹೊಂದಿತ್ತು. ಲೋಕಸಭೆ ಚುನಾವಣೆ ವೇಳೆ ಉಮೇಶ್ ಜಾಧವ್ ಕೈಗೆ ರಾಜೀನಾಮೆ ನೀಡಿ ತೆರವಾದ ಕ್ಷೇತ್ರಕ್ಕೆ ಪುತ್ರನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು. ಸಚಿವರಾದ ಕಾರಣ ಆರ್.ಶಂಕರ್ ಕಾಂಗ್ರೆಸ್ ಜತೆ ವಿಲೀನವಾಗಿದ್ದರಿಂದ ಸಂಖ್ಯಾಬಲದಲ್ಲಿ ವ್ಯತ್ಯಾಸ ಆಗಿಲ್ಲ. ಆದರೆ ಏಕಾಏಕಿ 14 ಶಾಸಕರ ರಾಜೀನಾಮೆಯಿಂದ ಕೈ ಬಲ 66ಕ್ಕೆ ಕುಸಿದಿದೆ. ಇದಕ್ಕೆ ಮತ್ತೆ ಕಾರಣ ಮೈತ್ರಿ ಸರ್ಕಾರದಲ್ಲಿ ಆಗದ ಕೆಲಸ ಎನ್ನಲಾಗುತ್ತಿದೆ. ಈಗ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದರೂ ಇಲ್ಲಿ ಕೈ ಹೆಚ್ಚಿನ ಸ್ಥಾನ ಕಳೆದುಕೊಳ್ಳುವಲ್ಲಿ ಸಂಶಯವಿಲ್ಲ.
ಪಕ್ಷ ಬಿಟ್ಟ 14 ಶಾಸಕರು ತಮ್ಮ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತ ಹಾಗೂ ಬಿಜೆಪಿ ಪಡೆದ ಮತಕ್ಕೆ ತಾಳೆ ಹಾಕಿದಾಗ ಕಾಂಗ್ರೆಸ್ಗೆ ಗೆಲುವು ಕಷ್ಟಕರ ಅನ್ನಿಸುತ್ತಿದೆ. ಕೆಆರ್ಪುರದಲ್ಲಿ ಎರಡನೇ ಬಾರಿ ಶಾಸಕರಾದ ಬೈರತಿ ಬಸವರಾಜು ಪಡೆದದ್ದು1.35.404 ಮತ, ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಪಡೆದದ್ದು 1,02, 675. ಗೆಲುವಿನ ಅಂತರ 32,729. ಇಲ್ಲಿ ಬಿಜೆಪಿಗೆ ನಂದೀಶ್ ರೆಡ್ಡಿ ಕೈ ಕೊಡುವುದು ಅನುಮಾನ ಹಿನ್ನೆಲೆ ಬಿಜೆಪಿಗೆ ಅವಕಾಶ ಹೆಚ್ಚಾಗಿದೆ. ಯಶವಂತಪುರದಲ್ಲಿ ಎಸ್.ಟಿ. ಸೋಮಶೇಖರ್ ಎರಡನೇ ಬಾರಿ ಆಯ್ಕೆಯಾಗಿದ್ದು, ಪಡೆದ ಮತ 1,15,273. ಇನ್ನು ಜೆಡಿಎಸ್ನ ಜವರಾಯಿಗೌಡ ಪಡೆದದ್ದು 1,04,562, ಬಿಜೆಪಿಯ ಜಗ್ಗೇಶ್ ಕಡೆಯ ಕ್ಷಣದಲ್ಲಿ ಟಿಕೆಟ್ ಪಡೆದು 59,308 ಮತ ಗಳಿಸಿದ್ದರು.
ಸೋತು ಗೆದ್ದಿದ್ದ ಸೋಮಶೇಖರ್ ಗೆಲುವಿನ ಅಂತರ 10,711. ಇಲ್ಲಿ ಕಾಂಗ್ರೆಸ್ಗೆ ನಿರಾಸೆಯಾಗುವ ಸಾಧ್ಯತೆ ಹೆಚ್ಚು. ಶಿವಾಜಿನಗರದಲ್ಲಿ ರೋಷನ್ ಬೇಗ್ ಪಡೆದದ್ದು 59,742 ಮತವಾದರೆ, ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಡೆದಿದ್ದು 44,702 ಮತ. ಗೆಲುವಿನ ಅಂತರ 15,040 ಮತ. ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಪಡೆದದ್ದು 1,08,064 ಮತ. ಆದರೆ ಬಿಜೆಪಿಯ ಮುನಿರಾಜುಗೌಡ ಪಡೆದದ್ದು 82,572. ಗೆಲುವಿನ ಅಂತರ 25,492. ಗೆಲುವು ಇಲ್ಲಿ ಕಾಂಗ್ರೆಸ್ಗೆ ಶ್ರಮದಾಯಕ.
ಚಿಕ್ಕಬಳ್ಳಾಪುರದಿಂದ ಎರಡನೇ ಸಾರಿ ಗೆದ್ದಿರುವ ಡಾ. ಕೆ.ಸುಧಾಕರ್ ಪಡೆದದ್ದು 82,006 ಮತ. ಆದರೆ ಜೆಡಿಎಸ್ನ ಕೆ.ಪಿ.ಬಚ್ಚೇಗೌಡರು ಪಡೆದದ್ದು 51,575. ಗೆಲುವಿನ ಅಂತರ 30,431. ಇಲ್ಲಿ ಕೂಡ ಕೈಗೆ ಕಷ್ಟವೇ ಕಟ್ಟಿಟ್ಟ ಬುತ್ತಿ. ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಪಡೆದದ್ದು 91,131 ಮತವಾದರೆ, ಬಿಜೆಪಿಯ ಶರತ್ ಬಚ್ಚೇಗೌಡ ಪಡೆದದ್ದು 84,525. ಗೆಲುವಿನ ಅಂತರ ಕೇವಲ 6,606. ಇಲ್ಲಿ ಬಿಜೆಪಿ ಸ್ಪರ್ಧೆ ತೀವ್ರವಾಗಿರಲಿದ್ದು, ಕಾಂಗ್ರೆಸ್ ಗೆಲುವು ಕಷ್ಟಕರ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ 90249 ಮತ ಗಳಿಸಿದ್ದು, ಬಿಜೆಪಿಯ ಅಶೋಕ್ ಪೂಜಾರಿ 75,969 ಮತ ಗಳಿಸಿ 14,280 ಮತಗಳ ಅಂತರದ ಸೋಲುಂಡಿದ್ದರು. ಇಲ್ಲಿಯೂ ಕಾಂಗ್ರೆಸ್ ಮರಳಿ ಸ್ಥಾನ ಗೆಲ್ಲಲು ಸಾಧನೆ ಮಾಡಬೇಕಿದೆ.
ಯಲ್ಲಾಪುರದಿಂದ ಶಿವರಾಮ್ ಹೆಬ್ಬಾರ್ 66,290 ಮತ ಪಡೆದಿದ್ದರೆ, ಬಿಜೆಪಿಯ ವಿ.ಎಸ್.ಪಾಟೀಲ್ ಪಡೆದದ್ದು 64,807 ಮತ. ಗೆಲುವಿನ ಅಂತರ ಕೇವಲ 1483 ಮತ ಅಷ್ಟೆ. ಇಲ್ಲಿ ಬಿಜೆಪಿ ಮತಗಳು ಹೆಚ್ಚಿದ್ದು, ಕಾಂಗ್ರೆಸ್ ಹರಸಾಹಸ ಪಡಲೇಬೇಕಿದೆ. ಹಿರೆಕೆರೂರಿನಿಂದ ಬಿ.ಸಿ.ಪಾಟೀಲ್ ಪಡೆದದ್ದು 72,461 ಮತ, ಬಿಜೆಪಿಯ ಯು.ಬಿ.ಬಣಕಾರ್ ಪಡೆದದ್ದು 71,906. ಇಲ್ಲಿ ಗೆಲುವಿನ ಅಂತರ ಕೇವಲ 555 ಮತಗಳು. ಹಾವೇರಿಯಲ್ಲಿ ಬಿಜೆಪಿ ಬಲ ಹೆಚ್ಚಾಗಿದ್ದು, ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪಡೆದದ್ದು 82,094 ಮತ. ಆದರೆ ಬಿಜೆಪಿಯ ಲಕ್ಷ್ಮಣ ಸವದಿ ಪಡೆದದ್ದು 79,763. ಗೆಲುವಿನ ಅಂತರ 2,331 ಮಾತ್ರ. ಇದರಿಂದ ಇಲ್ಲಿ ಕಾಂಗ್ರೆಸ್ ಹೆಣಗಾಡಬೇಕಿದೆ. ರಾಯಚೂರಿನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಡೆದದ್ದು 60,387 ಮತಗಳು, ಪ್ರತಿಸ್ಪರ್ಧಿ ಬಸನಗೌಡ ತುರ್ವಿಹಾಳ ಪಡೆದದ್ದು 60,174. ಗೆಲುವಿನ ಅಂತದ ಕೇವಲ 213. ಇಲ್ಲಿ ಬಿಜೆಪಿ ಬಲ ಹೆಚ್ಚಿದೆ. ಬಳ್ಳಾರಿ ವಿಜಯನಗರದ ಆನಂದ್ ಸಿಂಗ್ ಪಡೆದದ್ದು 83,214 ಮತ. ಆದರೆ ಬಿಜೆಪಿಯ ಹೆಚ್.ಆರ್. ಗವಿಯಪ್ಪ ಪಡೆದದ್ದು 74,956. ಗೆಲುವಿನ ಅಂತರ 8228 ಮತಗಳು. ಆನಂದ್ ಹಿಂದೆ ಬಿಜೆಪಿಯಲ್ಲಿದ್ದವರು. ಇದರಿಂದ ಕಾಂಗ್ರೆಸ್ಗೆ ಕ್ಷೇತ್ರ ಬಿಸಿ ತುಪ್ಪವಾಗಲಿದೆ.
ಬೆಳಗಾವಿಯ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಪಡೆದದ್ದು 83,060, ಬಿಜೆಪಿಯ ಬರಮಗೌಡ ಕಾಗೆ ಪಡೆದದ್ದು 50,118 ಮತಗಳು. ಅಂತರ 32,947. ಇಲ್ಲಿ ರಮೇಶ್ ಜಾರಕಿಹೊಳಿ ಪ್ರಭಾವ ಹೆಚ್ಚಿದ್ದು, ಕೈ ಕಚ್ಚುವ ಸಾಧ್ಯತೆ ಇದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಕೆಪಿಜೆಪಿ (ಪಕ್ಷೇತರ) ಶಾಸಕ ಆರ್.ಶಂಕರ್ ಪಡೆದದ್ದು 63,910 ಮತವಾದರೆ, ಕಾಂಗ್ರೆಸ್ನ ಕೆ.ಬಿ.ಕೋಳಿವಾಡ ಪಡೆದದ್ದು 59572. ಬಿಜೆಪಿಯ ಡಾ. ಬಸವರಾಜ್ ಕೇಲಗಾರ್ ಪಡೆದದ್ದು 48973. ಇಲ್ಲಿ ಗೆಲುವಿನ ಅಂತರ 4,338 ಮಾತ್ರ ಆಗಿದೆ. ಕೋಳಿವಾಡ ಪುತ್ರನಿಗೆ ಇಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದ್ದು, ಒಟ್ಟಾರೆ ಇಲ್ಲಿ ಕಾಂಗ್ರೆಸ್ ಗೆಲುವು ಶ್ರಮದಾಯಕವಾಗಲಿದೆ.