ಆನೇಕಲ್(ಬೆಂಗಳೂರು): ರೋಲ್ ಕಾಲ್ ನೀಡದಿದ್ದಕ್ಕೆ ಪುಂಡರ ಗುಂಪೊಂದು ಅಂಗಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆ ನೆರಳೂರು ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೊಸೂರು ಮುಖ್ಯ ರಸ್ತೆ ನೆರಳೂರು ಬಳಿ ಸ್ಥಳೀಯ ನಿವಾಸಿ ರಾಮಸ್ವಾಮಿ ಎಂಬುವವರು ಪಟಾಕಿ ಅಂಗಡಿ ತೆರೆದಿದ್ದು, ಕಳೆದೊಂದು ವಾರದಿಂದ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆ ರಾತ್ರಿ 10 ಗಂಟೆಗೆ ಅಂಗಡಿ ಕ್ಲೋಸ್ ಮಾಡಿದ್ದಾರೆ. ಈ ವೇಳೆ ಆಗಮಿಸಿದ, ತೇಜಸ್, ಹರೀಶ್, ಗುರುರಾಜ್ ಸೇರಿದಂತೆ 10ಕ್ಕೂ ಅಧಿಕ ಮಂದಿ ನಾವು ಲೋಕಲ್. ನಮಗೆ ರೋಲ್ ಕಾಲ್ ಕೊಡಬೇಕು. ಜತೆಗೆ ಬಿಟ್ಟಿ ಪಟಾಕಿ ನೀಡಬೇಕು ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಅಂಗಡಿ ಕ್ಲೋಸ್ ಮಾಡಿದ್ದು, ಬೆಳಗ್ಗೆ ಬನ್ನಿ ಎಂದಿದ್ದಾರೆ. ಅಷ್ಟಕ್ಕೆ ಅಂಗಡಿ ಬಳಿಯಿದ್ದ ರಾಮಸ್ವಾಮಿ ಅವರ ಮಕ್ಕಳಾದ ಕಿರಣ್ ಮತ್ತು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ರೋಲ್ ಕಾಲ್ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರ ಮೇಲೆ ಹಲ್ಲೆ.. ಘಟನೆಯಲ್ಲಿ ಹಲ್ಲೆಗೊಳಗಾದ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಅಂಗಡಿಗಳ ಮೇಲೆ ಲೋಕಲ್ ಗೂಂಡಾಗಳ ದಬ್ಬಾಳಿಕೆ ಹೆಚ್ಚಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟಾಕಿ ಅಂಗಡಿ ಮಾಲೀಕ ರಾಮಸ್ವಾಮಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹಬ್ಬದ ಸಂಭ್ರಮ ನೆಪದಲ್ಲಿ ಪಟಾಕಿ ಮೈಮೇಲೆ ಎಸೆದು ಪುಂಡಾಟ: ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ - ದೃಶ್ಯ ಸಿಸಿಟಿವಿಯಲ್ಲಿ ಸೆರೆ