ಬೆಂಗಳೂರು: ಐಎಂಎ ಹಗರಣದ ಆರೋಪಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಪತ್ನಿಯು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ವಂದನಾ ಸುಧಾ ವೆಂಕಟೇಶ್ ಎಂಬುವರು ಹಿಲೋರಿ ಪತ್ನಿ ವಿರುದ್ಧ ಫೇಸ್ಬುಕ್ ಪೋಸ್ಟ್ನಲ್ಲಿ ಆಪಾದಿಸಿದ್ದಾರೆ. ಅಜಯ್ ಹಿಲೋರಿ ಅವರ ಕುಟುಂಬ ಜಯನಗರದಲ್ಲಿ ವಾಸವಾಗಿದೆ. ಇವರ ಮಗ ನನ್ನ ಮನೆ ಮುಂದೆ ಕಿರುಚಾಡುತ್ತಾ ಆಟವಾಡಿದ್ಡಾನೆ. ನಿಧಾನವಾಗಿ ಆಟ ಆಡುವಂತೆ ವಂದನಾ ಹೇಳಿದ್ದಾರೆ.
ಬಳಿಕ ಹಿಲೋರಿ ಪತ್ನಿಗೂ ತಮ್ಮ ಮನೆಯ ಬಾಲ್ಕನಿಯಲ್ಲಿ ತಿಳಿ ಹೇಳಿದ್ದರಂತೆ. ಇದೇ ವಿಚಾರಕ್ಕೆ ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಎಂಟು ಮಂದಿ ಪೊಲೀಸರು ಮಕ್ಕಳ ಮೇಲಿನ ದೌರ್ಜನ್ಯ ಆರೋಪದಡಿ ವಿಚಾರಣೆ ಮಾಡಿದ್ದಾರೆ.
ಇಂತಹ ಬೆದರಿಕೆ ತಂತ್ರಗಳನ್ನು ನನ್ನ ವಿರುದ್ಧ ಬಳಸಬೇಡಿ ಎಂದು ಕೇಳಲು ನಾನು ಅವರ ಮನೆಗೆ ಹೋಗಿದ್ದೆ. ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಕ್ವಾರಂಟೈನ್ನಲ್ಲಿರುವ ಅಜಯ್ ಹಿಲೋರಿ ಪತ್ನಿ ನನ್ನ ಮೇಲೆ ಉಗುಳಿ ಅಸಹ್ಯವಾಗಿ ಬೈದಿದ್ದಾರೆ ಎಂದು ಮಹಿಳೆಯು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ನಗರ ದಕ್ಷಿಣ ವಿಭಾಗದ ಪೊಲೀಸ್ ಹಾಗೂ ಬೆಂಗಳೂರು ಪೊಲೀಸರಿಗೆ ಈ ಬರಹವನ್ನು ಟ್ಯಾಗ್ ಮಾಡಿ ನ್ಯಾಯ ಕೊಡಿಸಬಹುದಾ ಎಂದು ಪ್ರಶ್ನಿಸಿದ್ದಾರೆ.