ಬೆಂಗಳೂರು: ಗೋದಾಮಿನಲ್ಲಿದ್ದ ಸಂಗ್ರಹಿಸಿದ್ದ 21 ಐಫೋನ್ ಕಳವಾದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಫ್ಲಿಪ್‌ಕಾರ್ಟ್ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳಾಗಿರುವ ಫ್ಲಿಪ್‌ಕಾರ್ಟ್ ಕಂಪನಿಯ ವ್ಯವಸ್ಥಾಪಕ ಸಿ.ವಿ. ರಾಘವೇಂದ್ರ ಹಾಗೂ ಸಹಾಯಕ ವ್ಯವಸ್ಥಾಪಕ ಶ್ರೀರಾಮ ನಂದಿನ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಗೋದಾಮಿನಲ್ಲಿ 2022ರ ಜು.19ರಂದು ಕಳ್ಳತನ ನಡೆದಿದೆ ಎಂದು ಆರೋಪಿಸಲಾಗಿದೆ. ಆ.4ರಂದು ದೂರು ದಾಖಲಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಅರ್ಜಿದಾರರ ವಿರುದ್ಧ ಸಂದೇಹದ ಮೇಲೆ ದೂರು ದಾಖಲಿಸಲಾಗಿದೆ. ಆದರೆ, ಗೋದಾಮಿನ ಭದ್ರತಾ ಅಧಿಕಾರಿಯೇ ದೂರುದಾರರಾಗಿದ್ದಾರೆ. ಗೋದಾಮು ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ತಪಾಸಣೆ ನಡೆಸಲಾಗುತ್ತದೆ. ಹೀಗಿರುವಾಗ, ಐಫೋನ್ ಗಳು ಗೋದಾಮಿನಿಂದ ಹೊರ ಹೋಗಿದ್ದಾದರೂ ಹೇಗೆ ಎಂಬ ಬಗ್ಗೆ ಭದ್ರತೆಯ ಮೇಲ್ವಿಚಾರಣೆ ವಹಿಸಿದ್ದ ದೂರುದಾರರೇ ವಿವರಣೆ ನೀಡಬೇಕಾಗುತ್ತದೆ.
ಆದರೆ, ಭದ್ರತೆ ಒದಗಿಸುವ ತಮ್ಮ ಕರ್ತವ್ಯದಲ್ಲಿ ಆಗಿರುವ ಲೋಪದ ಬಗ್ಗೆ ಯಾವುದೇ ವಿವರಣೆಯನ್ನು ಅವರು ನೀಡಿಲ್ಲ. ಅರ್ಜಿದಾರರು ಗೋದಾಮಿನಲ್ಲಿ ಐಫೋನ್ ಬಾಕ್ಸ್‌ಗಳನ್ನು ವಿಂಗಡಿಸುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಸಂಶಯದಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಅವರೇ ಐಫೋನ್‌ಗಳನ್ನು ಕದ್ದಿದ್ದಾರೆ ಎನ್ನುವುದನ್ನು ತೋರಿಸುವ ಯಾವುದೇ ದಾಖಲೆಗಳು ಇಲ್ಲವೆಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.