ಬೆಂಗಳೂರು:ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಪಾಕಿಸ್ತಾನಿ ಪ್ರಜೆ ಎನ್ನಲಾಗುವ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 33 ವರ್ಷದ ಖತೀಜಾ ಮೆಹ್ರೀನ್ ಎಂಬ ಮಹಿಳೆ ತನ್ನ ಎರಡೂವರೆ ವರ್ಷದ ಮಗುವಿನೊಂದಿಗೆ 16 ತಿಂಗಳಿಂದ ಜೈಲಿನಲ್ಲಿದ್ದಾರೆ.
2021ರ ಜೂನ್ 9ರಂದು ಭಟ್ಕಳದಲ್ಲಿ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 2014ರಿಂದ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಎಂದು ಹೇಳಲಾಗುವ ಖತೀಜಾ ಮೆಹ್ರೀನ್ನನ್ನು ಬಂಧಿಸಲಾಗಿತ್ತು. ಜೊತೆಗೆ ಆಕೆಯ ಹೆಸರಿನಲ್ಲಿದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತಿತರ ನಕಲಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಜಾಮೀನು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ ಮಹಿಳೆಯು, ನಾನು ಕಳೆದ 16 ತಿಂಗಳಿನಿಂದ ತಾನು ಬಂಧನದಲ್ಲಿದ್ದೇನೆ. ನಾನು 1998ರಲ್ಲಿ ಭಟ್ಕಳದಲ್ಲಿ ಜನಿಸಿದ್ದು, ನೌನಿಹಾಲ್ ಸೆಂಟ್ರಲ್ ಶಾಲೆಯಲ್ಲಿ ಓದಿದ್ದೇನೆ. ನಾನು ಬಂಧನದಲ್ಲಿದ್ದಾಗ 2022ರ ಏಪ್ರಿಲ್ 22ರಂದು ಪತ್ನಿ ಜಾವೀದ್ ಮೊಹಿದ್ದೀನ್ ಮೃತಪಟ್ಟಿದ್ದಾರೆ. ನನಗೆ 7, 5 ಮತ್ತು 2.5 ವರ್ಷದ ಮೂವರು ಮಕ್ಕಳಿದ್ದಾರೆ. ಕೊನೆಯ ಮಗು ನನ್ನೊಂದಿಗೆ ಜೈಲಿನಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಇದುವರೆಗೆ ಯಾವುದೇ ಪ್ರಾಥಮಿಕ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕೇವಲ ಅನುಮಾನದ ಮೇಲೆ ನ್ಯಾಯಾಂಗ ಬಂಧನದಲ್ಲಿರಿಸಬಾರದು. ಈಕೆ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹಳು ಎಂದು ತಿಳಿಸಿದೆ.
ವಿದೇಶಿ ಕಾಯ್ದೆಯಡಿ ಮಹಿಲೆಯನ್ನು ಬಂಧಿಸಲಾಗಿದೆ. ಈ ಕಾಯ್ದೆಯಡಿ ಐದು ವರ್ಷಗಳವರೆಗೆ ಗರಿಷ್ಠ ಜೈಲು ಶಿಕ್ಷೆ ಮತ್ತು ಐಪಿಸಿ ಅಡಿಯಲ್ಲಿ ಆಕೆಯ ವಿರುದ್ಧದ ಆರೋಪಗಳು ಗರಿಷ್ಠ 7 ವರ್ಷಗಳ ಶಿಕ್ಷೆಯನ್ನು ಮಾತ್ರ ಹೊಂದಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದ್ದು, ಈಗಾಗಲೇ ಆರೋಪಿ 1 ವರ್ಷ 4 ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಪರಾಧ ಸಾಬೀತಾದರೂ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗದ ಕಾರಣ ದೀರ್ಘಾವಧಿಯ ಸೆರೆವಾಸ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಜಾಮೀನು ಮಂಜೂರಾಗಿದ್ದರೂ ಆರೋಪಿ ಮಹಿಳೆ ಹೊರಗಡೆ ಮುಕ್ತವಾಗಿ ಸಂಚರಿಸುವಂತಿಲ್ಲ. ಎಲ್ಲ ಸೌಲಭ್ಯಗಳುಳ್ಳ ಸರ್ಕಾರದ ಪುನರ್ವಸತಿ ಕೇಂದ್ರದಲ್ಲಿಯೇ ಇರಬೇಕು. ಒಂದು ವೇಳೆ ಪ್ರಕರಣ ಖುಲಾಸೆ ಆದ್ರೆ ಸಕ್ಷಮ ಪ್ರಾಧಿಕಾರಗಳ ಮೂಲಕ ಸರ್ಕಾರವು ಅರ್ಜಿದಾರ ಮಹಿಳೆಯ ರಾಷ್ಟ್ರೀಯತೆಯನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಆದರೆ ಆರೋಪ ಸಾಬೀತಾದಲ್ಲಿ ಶಿಕ್ಷೆಯ ನಂತರವಷ್ಟೇ ಮಹಿಳೆಯನ್ನು ಗಡೀಪಾರು ಮಾಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಇದನ್ನೂ ಓದಿ:ಪ್ರತಿಭಟನೆ ಬಿಸಿ: ಬೆಂಗಳೂರಲ್ಲಿ ನಡೆಯಬೇಕಿದ್ದ ವೀರ್ ದಾಸ್ ಕಾಮಿಡಿ ಶೋ ಮುಂದೂಡಿಕೆ