ಬೆಂಗಳೂರು:ಅಪಹರಣ ಹಾಗೂ ಸುಲಿಗೆಗೆ ಬೆಂಬಲ ನೀಡಿದ ಆರೋಪದಡಿ ಪ್ರೊಬೇಷನರಿ ಪಿಎಸ್ಐ, ಕಾನ್ಸ್‌ಟೆಬಲ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಸಹಿತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರೊಬೇಷನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್, ಕಾನ್ಸ್‌ಟೆಬಲ್ ಅಲ್ಲಾಭಕ್ಷ್, ಮಾಜಿ ಹೋಮ್ ಗಾರ್ಡ್ ರಾಜ್ ಕಿಶೋರ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಹಿಂದೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ಧಾರೂಢಗೆ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಹೋಮ್ ಗಾರ್ಡ್ ರಾಜ್ ಕಿಶೋರ್ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹದಿಂದ ಇದೇ ವರ್ಷ ಜುಲೈನಲ್ಲಿ ರಾಜ್ ಕಿಶೋರ್, ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಬಂದಿದ್ದ. ಈ ವೇಳೆ ಸಿದ್ಧಾರೂಢ ತನ್ನ ಬೈಕ್ ಸ್ಟಾರ್ಟ್ ಮಾಡಲು ಯತ್ನಿಸುತ್ತಿದ್ದುದನ್ನು ಕಂಡ ರಾಜ್ ಕಿಶೋರ್ ''ತಾನೇ ರಿಪೇರಿ ಮಾಡಿಸುತ್ತೇನೆ'' ಹೇಳಿದ್ದ.
ಅಲ್ಲದೆ ಸಿದ್ಧಾರೂಢನ ನಂಬಿಕೆ ಗಳಿಸಿಕೊಂಡು ''ನನ್ನ ಅಣ್ಣನಿಗೆ, ಕಾರ್ತಿಕ್ ಎಂಬಾತ ಹಣ ನೀಡಬೇಕು, ನೀವು ಬಂದರೆ ಹಣ ಕೊಡಿಸಬಹುದು ಸರ್'' ಎಂದು ಮನವಿ ಮಾಡಿದ್ದ. ರಾಜ್ ಕಿಶೋರ್ನ ಮಾತು ನಂಬಿದ್ದ ಸಿದ್ಧಾರೂಢ ಆತನೊಂದಿಗೆ ಸೇರಿ ಜೊತೆಯಲ್ಲಿ ಕಾನ್ಸ್‌ಟೆಬಲ್ ಅಲ್ಲಾಭಕ್ಷ್ ನನ್ನ ಕರೆದುಕೊಂಡು ಕಾರ್ತಿಕ್ ಇದ್ದ ಸ್ಥಳಕ್ಕೆ ಹೋಗಿದ್ದ. ಬಳಿಕ ಕಾರ್ತಿಕ್ನನ್ನು ಹೆಚ್ಎಸ್ಆರ್ ಲೇಔಟ್ನಿಂದ ಕರೆದೊಯ್ದಿದ್ದ ಮೂವರು, ಕೆ.ಜಿ ಹಳ್ಳಿಗೆ ಕರೆದುಕೊಂಡು ಹೋಗಿ ಒಂದೂವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಬೆದರಿದ್ದ ಕಾರ್ತಿಕ್ ಆರೋಪಿಗಳ ಅಕೌಂಟ್ಗೆ ವರ್ಗಾವಣೆ ಮಾಡಿದ್ದ.