ಬೆಂಗಳೂರು:ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂಂಗೊ ಇತ್ತೀಚೆಗೆ ಬೆಂಗಳೂರಿನ ದಾರೂಲ್ ಉಲೂಮ್ ಸಯೀದಿಯಾ ಎಂಬ ಮಕ್ಕಳ ಅನಾಥಾಶ್ರಮಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಆಶ್ರಮದ ಟ್ರಸ್ಟಿ ಆಶ್ರಫ್ ಖಾನ್ ಎಂಬುವರ ದೂರಿನ ಮೇರೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ದಾರೂಲ್ ಉಲೂಮ್ ಸಯೀದಿಯಾ ಮಕ್ಕಳ ಅನಾಥಾಶ್ರಮಕ್ಕೆ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂಂಗೊ ಭೇಟಿ ನೀಡಿದ್ದರು. ಅನಾಥಾಶ್ರಮದಲ್ಲಿ ಮಕ್ಕಳನ್ನು ತಾಲಿಬಾನ್ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಮಕ್ಕಳು ತಾಲಿಬಾನ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಡಿಯೋ ಜೊತೆಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.