ಬೆಂಗಳೂರು:ಖಾಸಗಿ ಕಂಪನಿ ಸಿಇಒ ತನ್ನ ಮಹಿಳಾ ಸಹೋದ್ಯೊಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಪ್ರಣಯ್ ಶ್ರೀವಾಸ್ತವ್ ಎಂಬಾತನ ವಿರುದ್ಧ ನೊಂದ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಹೋದ್ಯೋಗಿಯ ಹುಟ್ಟುಹಬ್ಬದ ಆಚರಣೆಗೆಂದು ಸಂತ್ರಸ್ತ ಯುವತಿ ತೆರಳಿದ್ದಳು. ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದ ಪ್ರಣಯ್ ತಡರಾತ್ರಿಯಾಗಿದೆ, ಹೀಗಾಗಿ ಬೆಳ್ಳಂದೂರಿನ ಎಸ್ಜೆಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಉಳಿದು ಮುಂಜಾನೆ ಹೋಗಿ ಎಂದು ಹೇಳಿದ್ದಾನೆ.
ಸಿಇಒ ಹೇಳುತ್ತಿದ್ದಾರೆ ಎಂದು ಒಪ್ಪಿದ ಸಂತ್ರಸ್ತೆ ಗೆಳತಿಯರ ಜೊತೆ ಕೋಣೆಯಲ್ಲಿ ನಿದ್ರೆಗೆ ಜಾರಿದ್ದಳು. ಇದೇ ಸಮಯವನ್ನು ಕಾದು ಕೂತಿದ್ದ ಪ್ರಣಯ್ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ.. ಈ ಘಟನೆ ಬಗ್ಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಟೆಕ್ಕಿ ಆರೋಪಿಸಿದ್ದಾಳೆ.
ಇದನ್ನೂ ಓದಿ:ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಡ್ರ್ಯಾಗರ್ ನಿಂದ ಇರಿದ ರೌಡಿಶೀಟರ್
ಹೀಗಾಗಿ ಸಂತ್ರಸ್ತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಣಯ್ ಶ್ರೀವಾಸ್ತವ್ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಹಿಂದೆಯೂ ಸಹ ಪ್ರಣಯ್ ಹಲವು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗ್ತಿದೆ. ಸದ್ಯ ಪ್ರಣಯ್ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.