ಬೆಂಗಳೂರು:ನಗರದ ಫ್ರೇಜರ್ ಟೌನ್ನಲ್ಲಿ 18 ಕೋಟಿ ರೂ. ಮೌಲ್ಯದ ಪಾಲಿಕೆ ಆಸ್ತಿಯನ್ನು ನಕಲಿ ಖಾತೆ ಮಾಡಿ, ವಾರ್ಡ್ ಸಂಖ್ಯೆ 78 ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಹಾಗೂ ಪಾಲುದಾರರು ಕಬಳಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದ ಜಿಲ್ಲಾಧ್ಯಕ್ಷ ಎನ್. ಆರ್ ರಮೇಶ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಸಿಬಿ, ಬಿಎಂಟಿಎಫ್ ಹಾಗೂ ಪಾಲಿಕೆ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಫ್ರೇಜರ್ ಟೌನ್ನ ಹೇನ್ಸ್ ರಸ್ತೆಯಲ್ಲಿ ಹಾಗೂ ಬಂಬೂ ಬಜಾರ್ ರಸ್ತೆಯಲ್ಲಿ ಎರಡು ಆಸ್ತಿಗಳನ್ನು ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯ ಕಾನೂನು ಬಾಹಿರವಾಗಿ ಕಬಳಿಸಿ, ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ. 1971-74 ರ ಅವಧಿಯಲ್ಲಿ ಮಾಜಿ ಪಾಲಿಕೆ ಸದಸ್ಯ ದಿವಂಗತ ಪಾಂಡ್ಯನ್ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾಗ ತೀರಿಹೋಗಿದ್ದರು. ಅವರ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಸ್ವತ್ತಿನ ಸಂಖ್ಯೆ - 25/2-1 ನ್ನು 50 ವರ್ಷಗಳ ಕಾಲಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಇದು ಏಳು ಕೋಟಿ ಬೆಲೆಬಾಳುವ ಜಾಗವಾಗಿದೆ. ಇದರ ಪಕ್ಕದ ಸ್ವತ್ತು 25/1 ನ್ನು 1963-64 ರಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ವಿ.ರಾಮಾಂಜಲು ನಾಯ್ಡು ಅವರಿಗೆ, ಅವರ ಕುಟುಂಬ ಕಷ್ಟದಲ್ಲಿತ್ತು ಎಂಬ ಕಾರಣಕ್ಕೆ 99 ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಈ ಎರಡೂ ಆಸ್ತಿಗಳ ಬೆಲೆ 18ಕೋಟಿ ರೂಪಾಯಿಯಾಗಿದೆ.
ನಂತರ ಪಾಲಿಕೆ ಆಯುಕ್ತರ ಅನುಮತಿ ಇಲ್ಲದೆ ಪಾಂಡ್ಯಾನ್ ಅವರ ಪತ್ನಿ ಬೇಬಿಯಮ್ಮ ಅವರಿಗೆ ಕಾನೂನು ಬಾಹಿರವಾಗಿ ಆಗಿನ ಪೂರ್ವ ವಲಯದ ಜಂಟಿ ಆಯುಕ್ತರು ಮಾರಾಟದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಬಳಿಕ ಬೇಬಿಯಮ್ಮ ಮಗಳಿಗೆ ದಾನ ಪತ್ರದ ಮೂಲಕ ಹಕ್ಕನ್ನು ವರ್ಗಾಯಿಸಿದ್ದಾರೆ. ಅದಾದ ನಂತರ ವಾಣಿ, ಕೆ. ತಾಜ್ ಹೆಸರಿಗೆ, ಕೆ.ತಾಜ್ ಎಂ. ಅಕ್ರಮುಲ್ಲಾ ಹೆಸರಿಗೆ ಕ್ರಯ ಪತ್ರಗಳ ಮೂಲಕ ಸ್ವತ್ತು ಮಾರಾಟ ಮಾಡಿದ್ದಾರೆ. ಈಗಾಗ್ಲೇ ಈ ಜಾಗದಲ್ಲಿ ನಿಯಮ ಬಾಹಿರವಾಗಿ ತಳಮಹಡಿ ಸೇರಿ ಏಳು ಅಂತಸ್ತಿನ ವಸತಿ ಸಂಕೀರ್ಣ ನಿರ್ಮಿಸಲಾಗ್ತಿದೆ ಎಂದರು.