ಕರ್ನಾಟಕ

karnataka

ETV Bharat / state

ಚಿಕಿತ್ಸೆಗೆ ದಾಖಲಾದ ಗರ್ಭಿಣಿ ಮೈಮೇಲಿದ್ದ ಚಿನ್ನಾಭರಣ ಕಳವು ಆರೋಪ: ಪ್ರಕರಣ ದಾಖಲು - ಆಸ್ಪತ್ರೆಲ್ಲಿ ಒಡವೆ ಕಳವು

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಗರ್ಭಿಣಿಯ ಮೈಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗರ್ಭಿಣಿಯ ಮೈಮೇಲಿದ್ದ ಚಿನ್ನಾಭರಣ ಕಳವು ಆರೋಪ
ಗರ್ಭಿಣಿಯ ಮೈಮೇಲಿದ್ದ ಚಿನ್ನಾಭರಣ ಕಳವು ಆರೋಪ

By ETV Bharat Karnataka Team

Published : Jan 5, 2024, 11:21 AM IST

Updated : Jan 5, 2024, 12:25 PM IST

ಬೆಂಗಳೂರು:ಚಿಕಿತ್ಸೆಗಾಗಿ ತೆರಳಿದ್ದ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸರ್ಜಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿ, ಗರ್ಭಿಣಿಯ ಪತಿ ಕಿಶೋರ್ ಎಂಬುವರು ಬೆಳ್ಳಂದೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕಿಶೋರ್, 6 ತಿಂಗಳ ಗರ್ಭಿಣಿ ಪತ್ನಿಯನ್ನು ಡಿಸೆಂಬರ್ 25ರಂದು ಚಿಕಿತ್ಸೆಗಾಗಿ ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅದೇ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು. ಡಿಸೆಂಬರ್‌ 27 ರಂದು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ದಾಗ ಚಿನ್ನಾಭರಣಗಳು ಮೈಮೇಲಿದ್ದವು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಹೊರಬಂದಾಗ ಮಾಂಗಲ್ಯ, ಚಿನ್ನದ ಚೈನ್, ಬೊಟ್ಟು ಸೇರಿದಂತೆ 72 ಗ್ರಾಂ ಚಿನ್ನಾಭರಣ ಕಾಣೆಯಾಗಿವೆ ಎಂದು ಕಿಶೋರ್ ದೂರಿದ್ದಾರೆ.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮೈಮೇಲಿದ್ದ ಚಿನ್ನಾಭರಣಗಳನ್ನ ರೋಗಿಯ ಕಡೆಯವರಿಗೆ ನೀಡದೇ, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ಳಂದೂರು ಪೊಲೀಸ್​ ಠಾಣೆಗೆ ಕಿಶೋರ್ ದೂರು ನೀಡಿದ್ದಾರೆ. ದೂರಿನ ಅನ್ವಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ, ಹಣ ಕೊಡಲಿಲ್ಲವೆಂದು ಇಟ್ಟಿಗೆಯಿಂದ ಹಲ್ಲೆ:ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಪುಂಡನೊಬ್ಬ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಡಿಸೆಂಬರ್ 29ರಂದು ರಾತ್ರಿ ಗಿರಿನಗರ ಠಾಣಾ ವ್ಯಾಪ್ತಿಯ ಮೂಕಾಂಬಿಕಾ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 58 ವರ್ಷದ ಸಿಂಗಾರ ವೇಲು ಎಂಬಾತನ ಮೇಲೆ ಧರ್ಮ ಎಂಬ ಆರೋಪಿ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ಡಿಸೆಂಬರ್ 29ರಂದು‌ ತಮ್ಮ ಮನೆಯ ಹತ್ತಿರದಲ್ಲಿ ಇರುವ ಫುಟ್‌ಪಾತ್ ಹೋಟೆಲ್‌ನಲ್ಲಿ ಊಟ ಮುಗಿಸಿ ಸಿಂಗಾರ ವೇಲು ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿ ಧರ್ಮ 'ನಾನು ಎಣ್ಣೆ ಕುಡಿಯಲು ಹಣ ಕೊಡು' ಎಂದು ಸಿಂಗಾರವೇಲುರಿಗೆ ಪೀಡಿಸಿದ್ದ. 'ನನ್ನ ಬಳಿ ಹಣವಿಲ್ಲ, ಮನೆಗೆ ಹೋಗಲು ಬಿಡು' ಎಂದಿದ್ದ ಸಿಂಗಾರವೇಲು, ಅಲ್ಲಿಂದ ತೆರಳಲು ಮುಂದಾಗಿದ್ದರು. ಸಿಟ್ಟಿಗೆದ್ದ ಆರೋಪಿ 'ನನಗೆ ದುಡ್ಡು ಕೊಡಲ್ವಾ? ನಾನ್ಯಾರು ಗೊತ್ತಾ?' ಎನ್ನುತ್ತಾ ಸ್ಥಳದಲ್ಲಿದ್ದ ಇಟ್ಟಿಗೆಯಿಂದ ಸಿಂಗಾರವೇಲುರ ತಲೆಗೆ ಹಲ್ಲೆ ಮಾಡಿದ್ದಾನೆ. ಕಿರುಚಲು ಮುಂದಾದಾಗ 'ಕಿರುಚಿದರೆ ಸಾಯಿಸುವುದಾಗಿ' ಬೆದರಿಸಿ ಸಿಂಗಾರವೇಲುರ ಬಾಯಿಯ ಮೇಲೆಯೂ ಇಟ್ಟಿಗೆಯಿಂದ ಹೊಡೆದಿದ್ದಾನೆ.

ಹಲ್ಲೆಯಿಂದ ಸಿಂಗಾರವೇಲುರ ತುಟಿ ಹರಿದು ಗಂಭೀರ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಪಡೆದು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಧರ್ಮನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಮನೆಗೆ‌‌ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಹತ್ಯೆ

Last Updated : Jan 5, 2024, 12:25 PM IST

ABOUT THE AUTHOR

...view details