ಬೆಂಗಳೂರು:ನೇಮಕದ ವೇಳೆ ಪತಿಯ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆನ್ನುವ ಆರೋಪದ ಮೇರೆಗೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಚ್. ಅನಿತಾ ಎಂಬುವರನ್ನು ಸೇವೆಯಿಂದ ವಜಾಗೊಳಿಸಿತ್ತು. ಆದ್ರೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಅನಿತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಆ ಮಹಿಳೆಗೆ ತಕ್ಷಣವೇ ಟೈಪಿಸ್ಟ್ ಹುದ್ದೆ ನೀಡಿ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ಸೂಚಿಸಿದೆ. ಜತೆಗೆ, ಪತಿಯ ಉಪಕಸುಬಿಗೂ ಅಭ್ಯರ್ಥಿಯ ಮೆರಿಟ್‌ಗೂ ಸಂಬಂಧ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಟೈಪಿಸ್ಟ್ ಹುದ್ದೆಗೆ ಸೂಕ್ತ ಅರ್ಹತೆ ಹೊಂದಿದ್ದಾರೆ. ಹಾಗಾಗಿ ಅವರ ಪತ್ನಿಯ ಉಪಕಸುಬು ಇಲ್ಲಿ ಪ್ರಸ್ತುತವಲ್ಲ. ಅಲ್ಲದೆ, ಅರ್ಜಿದಾರರು ಟೈಪಿಸ್ಟ್ ಹುದ್ದೆಗೆ ಅಗತ್ಯವಾದ ಎಲ್ಲಾ ಮೆರಿಟ್ ಹೊಂದಿದ್ದು, ಅದೇ ಆಧಾರದ ಮೇಲೆ ಅವರು ನೇಮಕಗೊಂಡಿದ್ದಾರೆ. ಅವರ ಪತಿಯ ಉಪಕಸುಬಿನ ಆಧಾರದಲ್ಲಿ ಅವರಿಗೆ ಉದ್ಯೋಗ ನೀಡಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮತ್ತು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಸಂದರ್ಶನದ ವೇಳೆ ಏನು ನಡೆದಿದೆ ಎಂಬುದಕ್ಕೆ ದಾಖಲೆ ಇಲ್ಲ. ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹೇಳಿರುವಂತೆ ಸಂದರ್ಶನದ ವೇಳೆ ತಪ್ಪು ಮಾಹಿತಿ ನೀಡಿದ್ದಾರೆಂಬುದನ್ನು ಒಪ್ಪಲಾಗದು. ಪತಿಯ ಉಪಕಸುಬಿಗೂ ಅರ್ಜಿದಾರರ ಉದ್ಯೋಗಕ್ಕೂ ಸಂಬಂಧವಿಲ್ಲ. ಜತೆಗೆ ಜಾತಿ ಪರಿಶೀಲನಾ ಸಮಿತಿ ಕೂಡ ಅರ್ಜಿದಾರರ ಪತಿ ಸರ್ಕಾರದಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿದೆ. ಹಾಗಾಗಿ ಸೇವೆಯಿಂದ ವಜಾ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?: ದಾವಣಗೆರೆ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಟೈಪಿಸ್ಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಧಿಸೂಚನೆಯಂತೆ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು, ಆಗ ವೇಳೆ ವೈವಾಹಿಕ ಸ್ಥಿತಿಗತಿ ಕಾಲಂನಲ್ಲಿ ಮದುವೆ ಆಗಿದೆ ಎಂದು ಭರ್ತಿ ಮಾಡಿದ್ದರು. ಸೂಕ್ತ ಮೆರಿಟ್ ಇದ್ದ ಕಾರಣ ಅವರು 2022ರ ಡಿ.21ರಂದು ಟೈಪಿಸ್ಟ್ ಆಗಿ ಮೀಸಲು ವರ್ಗದಡಿ ನೇಮಕಗೊಂಡಿದ್ದರು.