ಯಲಹಂಕ (ಬೆಂಗಳೂರು): ಮಾಜಿ ಸಚಿವ, ರಾಜರಾಜೇಶ್ವರಿ ನಗರದ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಭೂಮಿ ದಾಖಲೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಮುನಿರತ್ನ ಅವರನ್ನು ಆರೋಪಿ ಸಂಖ್ಯೆ 4 (A4) ಎಂದು ಗುರುತಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಇದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಠಾಣೆಯಲ್ಲಿ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ. ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪದಡಿ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ಅವರು ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಇದರ ಜೊತೆಗೆ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಜಿಲೆಟಿನ್ ಸ್ಫೋಟ ಮಾಡಿದ ಆರೋಪವೂ ಕೇಳಿಬಂದಿತ್ತು.
ಹುಣಸಮಾರನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ :ಹುಣಸಮಾರನಹಳ್ಳಿ ಜಮೀನಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ಈ ಬಗ್ಗೆ ದೂರು ದಾಖಲು ಮಾಡಿದ್ದರು. ಹುಣಸಮಾರನಹಳ್ಳಿ ಸರ್ವೆ ನಂಬರ್ 177/3, 178/1.2.3 ಹಾಗೂ ಸೊಣಪ್ಪನಹಳ್ಳಿ ಸರ್ವೆ ನಂ. 34/1 2 3, 17/7 8,9ರಲ್ಲಿ ಗಣಿಗಾರಿಕೆ ಮಾಡಲಾಗಿದ್ದು, ಆರೋಪಿಗಳಾದ ಆನಂದನ್, ಗಣೇಶ್, ರಾಧಮ್ಮ, ಶಾಸಕ ಮುನಿರತ್ನ ವಿರುದ್ಧ ಸ್ಫೋಟಕ ಕಾಯ್ದೆ 1884 US 9B(1b), ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ :ಕೋಮುದ್ವೇಷ ಭಾಷಣ ಆರೋಪ: ಸಚಿವ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು