ಬೆಂಗಳೂರು : ನೀರು ಪೂರೈಕೆ ಶುಲ್ಕ ವಸೂಲಿ ಮಾಡಿ ಜಲಮಂಡಳಿಗೆ ಪಾವತಿಸದೆ ವಂಚಿಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿಯ 13 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಜಲಮಂಡಳಿಯಿಂದ ನೀರು ಪೂರೈಕೆ ಶುಲ್ಕವನ್ನು ನಗದು ಅಥವಾ ಡಿಡಿ, ಚೆಕ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಹೀಗೆ ವಸೂಲಿ ಮಾಡಿದ ಹಣವನ್ನು ಜಲಮಂಡಳಿಯ ನಗದು ಪುಸ್ತಕದಲ್ಲಿ ನೋಂದಾಯಿಸುವುದರ ಜೊತೆ ಜೊತೆಗೆ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಅದನ್ನು ನಮೂದಿಸಬೇಕಿತ್ತು.ಬಳಿಕ ಹಣವನ್ನು ಜಲಮಂಡಳಿಯ ಬ್ಯಾಂಕ್ ಖಾತೆಗೆ ಪಾವತಿಸಬೇಕಿತ್ತು. ಆದರೆ, 2016ರಿಂದ 2018ರವರೆಗೆ 850 ಕ್ಕೂ ಹೆಚ್ಚಿನ ಗ್ರಾಹಕರಿಂದ ವಸೂಲಿಯಾದ ನೀರಿನ ಶುಲ್ಕವನ್ನು ಜಲಮಂಡಳಿ ಬ್ಯಾಂಕ್ ಖಾತೆಗೆ ಪಾವತಿಸದೆ, ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಹಣ ಪಾವತಿಸಲಾಗಿದೆ ಎಂದು ನಮೂದಿಸಿ ವಂಚಿಸಿದ ಪ್ರಕರಣ ಕಳೆದ ತಿಂಗಳು ಬೆಳಕಿಗೆ ಬಂದಿತ್ತು.
ಜಲಮಂಡಳಿಗೆ ಹಣ ಪಾವತಿಸದೆ ವಂಚನೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಮಂಡಳಿಯು ಸಹಾಯಕ ನಿಯಂತ್ರಕರು (ಲೆಕ್ಕ) ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ಪರಿಶೋಧನೆಗೆ ಸೂಚಿಸಲಾಗಿತ್ತು. ಪರಿಶೋಧನೆಯ ಮಧ್ಯಂತರ ವರದಿ ಬಂದಿದ್ದು, ಅಂದಾಜು 1.75 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬಿಲ್ ಮೊತ್ತ ವಸೂಲಿಯಾಗಿದೆ ಎಂದೂ ತಿಳಿದುಬಂದಿತ್ತು.