ಬೆಂಗಳೂರು:ಶ್ರೀನಿವಾಸಪುರ ತಾಲೂಕು ನೆಲವಂಕಿ ಹೋಬಳಿಯ ಉಪ್ಪಾರಪಲ್ಲಿ ಹಾಗೂ ಮಲಪಲ್ಲಿಯಲ್ಲಿನ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ಅರಣ್ಯ ಒತ್ತುವರಿ ಆರೋಪದಡಿ ತೆರವುಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅರಣ್ಯ ಇಲಾಖೆ ಮುಂದಾಗಿದ್ದ ತೆರವು ಕಾರ್ಯಾಚರಣೆ ಪ್ರಶ್ನಿಸಿ ಉಪ್ಪಾರಪಲ್ಲಿಯ ಗುಲ್ಜಾರ್ ಪಾಷ ಮತ್ತು ನಜರ್ ಹುಸೇನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ಅರ್ಜಿದಾರರು 1995 - 96ರಿಂದಲೂ ಮಲ್ಲಪಲ್ಲಿಯಲ್ಲಿಯ ಸರ್ವೇ ನಂಬರ್ 34ರ ಜಮೀನಿಗೆ ಕಾನೂನು ರೀತ್ಯಾ ಪಹಣಿ ಹಾಗೂ ಮಾಲೀಕತ್ವದ ಕಂದಾಯ ದಾಖಲೆಗಳನ್ನು ಹೊಂದಿ ಉಳುಮೆ ಮಾಡುತ್ತಾ ಬಂದಿದ್ದಾರೆ. ಮಾವಿನ ತೋಪು ಅಭಿವೃದ್ಧಿಪಡಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿದಾರರ ಜಮೀನು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ ಎಂದು ಆರೋಪಿಸಿ ಕಾನೂನು ಬಾಹಿರವಾಗಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ರಾಜಕೀಯ ದುಷ್ಪ್ರೇರಣೆಯಿಂದ ಅರ್ಜಿದಾರರ ಜಮೀನು ತೆರವಿಗೆ ಮುಂದಾಗಿದ್ದಾರೆ. ಶ್ರೀನಿವಾಸಪುರ ವಿಶ್ವಪ್ರಸಿದ್ಧಿ ಮಾವಿನ ತೋಪಿಗೆ ಹೆಸರಾಗಿದ್ದು, ಅರ್ಜಿದಾರರ ಜಮೀನಿನ ಸ್ವಾಧೀನಾನುಭವದ ಕಾನೂನು ಬದ್ಧತೆಯನ್ನು ನಿರ್ಲಕ್ಷಿಸಿ ನೆಲಸಮಕ್ಕೆ ಮುಂದಾಗಿದ್ದಾರೆ. ಇದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ತಡೆ ನೀಡಿ ತೋಪಿನ ರಕ್ಷಣೆಗೆ ನಿರ್ದೇಶಿಸಬೇಕು ಎಂದು ವಕೀಲರು ಕೋರಿದರು.