ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣನವರಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಎಷ್ಟು ಎಕರೆ ಜಮೀನು ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಕಾಲಾವಕಾಶ ನೀಡಿದೆ. ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ವೆಂಕಟೇಶ್ ನಾಯಕ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ವಿಚಾರಣೆ ವೇಳೆ ಸರ್ಕಾರದ ವಕೀಲ ಕಿರಣ್ ಕುಮಾರ್ ಅವರು 2014ರ ಆಗಸ್ಟ್ 4ರ ವರದಿಯನ್ನು ಲೋಕಾಯುಕ್ತರು 2014ರ ಆಗಸ್ಟ್ 5ರಂದು ಒಪ್ಪಿದ್ದು, ಲೋಕಾಯುಕ್ತ ಆದೇಶವು 14 ಎಕರೆಗೆ ಸಂಬಂಧಿಸಿದ್ದೋ ಅಥವಾ 71 ಎಕರೆಗೆ ಸಂಬಂಧಿಸಿದ್ದೋ ಎಂಬುದನ್ನು ಪರಿಶೀಲಿಸಲು ಕಾಲಾವಕಾಶ ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು 2023ರ ಮೇ 23ಕ್ಕೆ ಮುಂದೂಡಿದೆ.
2023ರ ಮಾರ್ಚ್ 16ರ ಆದೇಶದ ಹಿನ್ನೆಲೆಯಲ್ಲಿ ಸರ್ಕಾರದ ವಕೀಲರು ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್. ಜಯರಾಂ ಅವರ ಪ್ರಮಾಣ ಪತ್ರ ಸಲ್ಲಿಸಿ, ಇದರಲ್ಲಿ 2004ರ ಆಗಸ್ಟ್ 4ರ ತೆರವು ಆದೇಶದ ಪ್ರಕಾರ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆ 4 ಗುಂಟೆ ವಶಕ್ಕೆ ಪಡೆಯಲಾಗಿದೆ. ಸ್ವತಂತ್ರವಾಗಿ ಮಹಜರ್ ನಡೆಸಿ, ಇಡೀ ಪ್ರದೇಶಕ್ಕೆ ತಂತಿ ಬೇಲಿ ಹಾಕಲು ಆದೇಶಿಸಲಾಗಿದೆ. ಅಲ್ಲದೆ, ತೆರವು ಮಾಡಿಕೊಂಡಿರುವವರಿಗೆ ಒತ್ತುವರಿ ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಮೂವರು ಪ್ರತಿಕ್ರಿಯಿಸಿದ್ದು, ತಾವು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ವಿವರಿಸಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.