ಬೆಂಗಳೂರು: ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳಿರುವ ತುಮಕೂರು ಮತ್ತು ಕೋಲಾರ ಡಿಸಿಸಿ ಬ್ಯಾಂಕ್‌ಗೆ ಜಿ ಎಂ ರವೀಂದ್ರ ಅವರನ್ನು ಅಡ್ಮಿಷನಲ್ ರಿಜಿಸ್ಟ್ರಾರ್ ಆಗಿ ತನಿಖೆಗೆ ನೇಮಕ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಹಕಾರ ಇಲಾಖೆ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲದೇ ಈ ಎರಡು ಬ್ಯಾಂಕ್ ಮೇಲಿನ ಆರೋಪದ ಕುರಿತು ಹದಿನೈದು ದಿನದೊಳಗೆ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವಂತೆ ಕೂಡ ಸೂಚಿಸಲಾಗಿದೆ ಎಂದು ಹೇಳಿದರು.
ಸಚಿವ ಎಸ್. ಟಿ ಸೋಮಶೇಖರ್ ಅವರು ಮಾತನಾಡಿರುವುದು ಕೋಲಾರ ಡಿಸಿಸಿ ಬ್ಯಾಂಕ್ನಿಂದ ಸ್ವಸಹಾಯ ಗುಂಪುಗಳಿಗೆ ಮನಸೋಇಚ್ಚೆ ಸಾಲ ನೀಡಲಾಗುತ್ತಿದೆ. ಕೆಲವೇ ಕ್ಷೇತ್ರಗಳಿಗೆ ಹೆಚ್ಚು ಸಾಲ ನೀಡಲಾಗುತ್ತಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.
ಕಾನೂನು ರೀತಿ ಕ್ರಮ: ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಕ್ಷೇತ್ರಕ್ಕೆ 100 ಕೋಟಿ ರೂ. ಹಣ ನೀಡಿದ್ದಾರೆ ಎಂಬ ದೂರು ಬಂದಿದೆ. ಸಾಲ ನೀಡುವುದಕ್ಕೆ 10% ಷೇರು ಹಣವನ್ನು ಸಂಗ್ರಹ ಮಾಡಲಾಗುತ್ತದೆ. ಇದರಲ್ಲಿ 5% ಡಿಸಿಸಿ, 5% ಫ್ಯಾಕ್ಸ್ ಗೆ ವರ್ಗಾವಣೆ ಮಾಡಬೇಕು. ಆದರೆ 10% ಷೇರು ಹಣವನ್ನು ಡಿಸಿಸಿ ಬ್ಯಾಂಕ್ ನವರೇ ಇಟ್ಟುಕೊಂಡಿದ್ದಾರೆ ಎಂಬ ದೂರು ಬಂದಿದ್ದು, ಈ ಬಗ್ಗೆ ಕೂಡ ತನಿಖೆ ಮಾಡಿ ವರದಿ ಬಂದ ಬಳಿಕ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಿಚರಾಣಾಧಿಕಾರಿ ನೇಮಕ: ಕೋಲಾರ ಡಿಸಿಸಿ ಬ್ಯಾಂಕ್ ಗೆ 623 ಕೋಟಿ ರೂ. ತುಮಕೂರು ಡಿಸಿಸಿ ಬ್ಯಾಂಕ್ ಗೆ 692 ಕೋಟಿ ರೂ. ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಸಮನಾಗಿ ಸಾಲ ಹಂಚಿಕೆ ಮಾಡಿಲ್ಲ. ಬಡ್ಡಿ ಸಹಾಯಧನ ಹೆಚ್ಚು ಕ್ಲೈಮ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಮಾಡಿ ವರದಿ ನೀಡಲು ವಿಚರಾಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸುತ್ತೋಲೆ ಹೊರಡಿಸಲಾಗಿದೆ:ತುಮಕೂರಿನಲ್ಲಿ ರೈತರಿಂದ ಅನಧಿಕೃತವಾಗಿ 1300 ರೂ. ಹಣ ಸಂಗ್ರಹ ಮಾಡಿರುವುದರ ಬಗ್ಗೆ ಅಧಿಕೃತವಾಗಿ ಯಾರೂ ದೂರು ನೀಡಿಲ್ಲ. ಸಚಿವ ಮಾಧುಸ್ವಾಮಿ ಅವರು ಹೇಳಿದ ನಂತರ ರೈತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ತುಮಕೂರು ಮಾತ್ರವಲ್ಲದೆ ಇತರೆ ಡಿಸಿಸಿ ಬ್ಯಾಂಕ್ಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲು ಕ್ರಮವಹಿಸಲಾಗುತ್ತಿದೆ. ಈ ವಿಷಯವನ್ನು ಯಾವಾಗಲೋ ಹೇಳಿದ್ದು ಎಂದು ಮಾಧುಸ್ವಾಮಿ ಅವರೇ ಹೇಳಿದ್ದಾರೆ. ಆದರೆ, ಇಲಾಖೆ ಮೇಲೆ ಆರೋಪ ಬಂದಾಗ ಆ ಕುರಿತು ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ನೋಡಲ್ ಅಧಿಕಾರಿಗಳಾಗಿ ನೇಮಕ: ಈ ವರ್ಷ 24 ಸಾವಿರ ಕೋಟಿ ರೂ. ಸಾಲವನ್ನು 33 ಲಕ್ಷ ರೈತರಿಗೆ 21 ಡಿಸಿಸಿ ಬ್ಯಾಂಕ್ ಮುಖಾಂತರ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಯಾರು ಎಷ್ಟು ಸಾಲ ನೀಡಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. 19 ಡಿಸಿಸಿ ಬ್ಯಾಂಕ್ ಗಳಿಗೆ ಅಡಿಷನಲ್ ರಿಜಿಸ್ಟ್ರಾರ್ ಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಗಣಪತಿ ಹಬ್ಬಕ್ಕೆ ಅಡ್ಡ ಬಂದ್ರೆ ಸರಿಯಾದ ಬೆಲೆ ತೆರಬೇಕಾಗುತ್ತದೆ: ಕೆ ಎಸ್ ಈಶ್ವರಪ್ಪ