ಬೆಂಗಳೂರು: ನಗರದ ವರ್ತೂರು ಹೋಬಳಿಯ ಸಿದ್ಧಾಪುರದ ಗ್ರಾಮದಲ್ಲಿ ಜಲಾಯನ ಪ್ರದೇಶವಾದ ಕಮಲದ ಕೊಳಕ್ಕೆ ಸೇರಿದ್ದು ಎನ್ನಲಾದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮಂಜೂರು ಮಾಡಲಾಗಿದೆ ಎಂಬುದಾಗಿ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಲ್ಲದೇ, ವಿವಾದಿತ ಸ್ಥಳದಲ್ಲಿ ಕಮಲದ ಕೊಳವಿತ್ತು ಎಂಬುದನ್ನು ಕಂದಾಯ ದಾಖಲೆ ಮತ್ತು ನಕ್ಷೆ ಮಂಜೂರಾತಿ ಮೂಲಕ ದೃಢಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕೊಳವಿದ್ದ ಜಾಗದಲ್ಲಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ವೈಟ್ ಫೀಲ್ಡ್ ರೈಸಿಂಗ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ ದಾಖಲೆ ಪರಿಶೀಲನೆ ನಡೆಸಿದ ನ್ಯಾಯಪೀಠ, 1970-71ರ ಕಂದಾಯ ದಾಖಲೆಗಳಲ್ಲಿ ವಿವಾದಿತ ಸ್ಥಳವು ಮುಫತ್ ಕಾವಲ್ ಸರ್ಕಾರಿ ಕುಂಟೆಯಿದ್ದು, ಅದನ್ನು ಹನುಮಂತಪ್ಪ ಎಂಬವರು ಉಳುಮೆ ಮಾಡುತ್ತಿದ್ದರು ಎಂದು ತಿಳಿಯುತ್ತದೆ. 1992-92ರಿಂದ 1994-95ರರವರೆಗಿನ ದಾಖಲೆಗಳಲ್ಲಿ ಮುಫತ್ ಕಾವಲ್ ಜೊತೆಗೆ ಕುಂಟೆ, ಅಥವಾ ಸರ್ಕಾರಿ ಜಲಮೂಲ ಎಂಬುದಾಗಿ ಉಲ್ಲೇಖವಾಗಿದೆ. ಪ್ರಕರಣದ ಪಕ್ಷಕಾರರು ಮತ್ತು ಸರ್ಕಾರಿ ಪ್ರಾಧಿಕಾರಿಗಳು ಸಲ್ಲಿಸಿದ ದಾಖಲೆಗಳಲ್ಲಿ ಕೆರೆ/ಕುಂಟೆ ಸರ್ವೇ ನಂ.8ರಲ್ಲಿ ಇರುವುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿತು.