ಕರ್ನಾಟಕ

karnataka

ಮ್ಯಾಟ್ರಿಮೋನಿ ನಂಟು, 2 ವರ್ಷದಿಂದ ಸಂಬಂಧ: ಯುವಕನ ವಿರುದ್ಧ ಯುವತಿ ದೂರು

By

Published : May 26, 2023, 1:47 PM IST

ಮ್ಯಾಟ್ರಿಮೋನಿ ಸೈಟ್​ನಲ್ಲಿ ಪರಿಚಯವಾದ ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ ಎಂದು ಯುವತಿಯೊಬ್ಬಳು ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

DJ Halli police station
ಡಿಜೆ ಹಳ್ಳಿ ಪೊಲೀಸ್ ಠಾಣೆ

ಬೆಂಗಳೂರು:ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವಕನೊಬ್ಬ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು 27 ವರ್ಷದ ಯುವತಿಯೊಬ್ಬಳು ಆರೋಪ ಮಾಡಿದ್ದಾಳೆ. ಈ ಸಂಬಂಧ ಬೆಂಗಳೂರಿನ ದೇವರ ಜೀವನಹಳ್ಳಿ (ಡಿಜೆ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನೋಮಾನ್ ಷರೀಫ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಯುವತಿ ತನ್ನ ಪೋಷಕರನ್ನು ಕಳೆದುಕೊಂಡು ಮಾವನ ಮನೆಯಲ್ಲಿ ವಾಸವಾಗಿದ್ದಳು. 2021 ರಲ್ಲಿ ಮದುವೆ ವಿಚಾರವಾಗಿ ಶಾದಿ ಡಾಟ್ ಕಾಮ್​ನಲ್ಲಿ ವರನನ್ನು ಹುಡುಕಲು ಆರಂಭಿಸಿದ್ದಳು. ಆಗ ನೋಮಾನ್ ಷರೀಫ್​ನ ಪರಿಚಯವಾಗಿತ್ತು. ಇದರಿಂದ ಕಳೆದ ಎರಡು ವರ್ಷಗಳಿಂದ ಇಬ್ಬರು ನಡುವೆ ಸಂಪರ್ಕ ಬೆಳೆದಿತ್ತು.

''ಮೊದಲಿಗೆ ಕೆಲ ದಿನಗಳ ಕಾಲ ವಾಟ್ಸಪ್​ ಚಾಟಿಂಗ್, ಫೋನ್ ಕಾಲ್​ ಸಂಪರ್ಕ ಮುಂದುವರೆದಿತ್ತು. ಹೀಗಿರುವಾಗ ಒಮ್ಮೆ ತನ್ನ ಪೋಷಕರು ನಿನ್ನನ್ನು ನೋಡಲು ಬಯಸುತ್ತಿದ್ದಾರೆ ಎಂದು ಹೇಳಿ ಆರೋಪಿ ಹೆಬ್ಬಾಳದ ಹೋಟೆಲ್​ ರೂಮ್​ಗೆ ಕರೆದೊಯ್ದಿದ್ದ. ಆದರೆ, ಅಲ್ಲಿಗೆ ಹೋದಾಗ ಪೋಷಕರು ಬಂದಿರಲಿಲ್ಲ. ಆದರೆ, ನಾನೇ ನಿನ್ನ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ'' ಎಂದು ಸಂತ್ರಸ್ತೆ ದೂರಿದ್ದಾಳೆ.

''ಇದಾದ ನಂತರವೂ ಸಹ ಯಾವತ್ತಿದ್ದರೂ ತಾನೇ ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತೆ ಲೈಂಗಿಕ ಸಂಪರ್ಕ ಹೊಂದಿದ್ದ. ನಂತರದಲ್ಲಿ ಸಹಕರಿಸದಿದ್ದರೆ ತಾನು ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕುವ ಮೂಲಕ ಅನೇಕ ಬಾರಿ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ, ತಾನು ಬಾಡಿಗೆ ಮನೆ ಪಡೆಯಲು ಐವತ್ತು ಸಾವಿರ ರೂ. ಹಣ ಕೇಳಿದ್ದ. ಆದರೆ, ನಾನು ಹಣ ನೀಡಿರಲಿಲ್ಲ'' ಎಂದು ನೊಂದ ಯುವತಿ ತಿಳಿಸಿದ್ದಾಳೆ.

''ಇದರ ಬಳಿಕ ಬೇರೆ ಯುವತಿಯೊಬ್ಬಳೊಂದಿಗೆ ನೋಮಾನ್ ಮದುವೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ನಂತರವೂ ಮನೆಗೆ ಬಂದಿದ್ದ ಆರೋಪಿ, ಪೋಷಕರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ, ನಂತರ ನನ್ನಿಂದ ಸಂಪರ್ಕ ಕಡಿದುಕೊಂಡಿದ್ದ. ಹೀಗಾಗಿ ನಾನು ನನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದೆ. ಆಗ ಆರೋಪಿಯ ಕಡೆಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು. ಆದರೆ, ಮದುವೆಗೆ ಒಪ್ಪದೇ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಕುಟುಂಬದವರನ್ನೂ ಸಾಯಿಸುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ'' ಎಂದು ಆರೋಪಿಸಿದ್ದಾಳೆ.

''ಈ ವಿಷಯವಾಗಿ ಒಂದು ತಿಂಗಳ ಹಿಂದೆಯೇ ಡಿಜೆ ಹಳ್ಳಿ ಪೊಲೀಸ್​ ಠಾಣೆಗೆ ನಾನು ದೂರು ನೀಡಿದ್ದೇನೆ. ಆದರೆ, ಅಲ್ಲಿಂದಲೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಭವಿಷ್ಯ ಮತ್ತು ಮರ್ಯಾದೆ ವಿಷಯವಾಗಿ ನೋಮಾನ್ ಷರೀಫ್​ನೊಂದಿಗೆ ನನಗೆ ಮದುವೆ ಮಾಡಿಸಬೇಕು'' ಎಂದು ಯುವತಿ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ:ಭಾವಿ ವರನಿಂದ ಯುವತಿಗೆ ವಂಚನೆ: ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದು

ಸ್ನೇಹಿತನಿಗೆ ಚಾಕು ಇರಿತ:ಊಟದ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಯುವಕನಿಗೆ ಚಾಕು ಇರಿದ ಘಟನೆ ತಡರಾತ್ರಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟಿನಲ್ಲಿ ನಡೆದಿದೆ‌. ರಾಮಚಂದ್ರ ಎಂಬಾತ ಚಾಕು ಇರಿತಕ್ಕೆ ಇಳಗಾಗಿದ್ದು, ಈತನ ಸ್ನೇಹಿತರಾದ ಮಹಾಂತೇಶ್, ಹರೀಶ್ ಹಾಗೂ ಅಮ್ಜದ್ ಎಂಬುವವರೇ ಈ ದಾಳಿ ಮಾಡಿದ್ದಾರೆ.

ಗುರುವಾರ ರಾತ್ರಿ ನಾಲ್ವರು ಸ್ನೇಹಿತರೂ ಸಹ ರೂಮಿನಲ್ಲಿ ಕುಳಿತು ಪಾರ್ಟಿ ಮಾಡಿದ್ದರು. ಊಟ ಪಾರ್ಸೆಲ್ ತರುವ ವಿಚಾರವಾಗಿ 'ನಿತ್ಯವೂ ನಾನೇ ಊಟ ತರಬೇಕಾ.?' ಎಂದು ರಾಮಚಂದ್ರ ಮಹಂತೇಶನ ಜೊತೆಗೆ ಜಗಳ ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ರಾಮಚಂದ್ರನಿಗೆ ಸ್ನೇಹಿತರೇ ಚಾಕು ಇರಿದಿದ್ದರು. ಸದ್ಯ ಗಾಯಾಳು ರಾಮಚಂದ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ತಿಳಿಸಿದ್ದಾರೆ.

ಇದನ್ನೂ ಓದಿ:IPL ಬೆಟ್ಟಿಂಗ್ ದಂಧೆಗೆ ಮಂಡ್ಯದಲ್ಲಿ ಎಳನೀರು ವ್ಯಾಪಾರಿ ಬಲಿ

ABOUT THE AUTHOR

...view details