ಶಿವಾಜಿನಗರ : ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆದ ದಿನದಿಂದಲೂ ಸೈಲೆಂಟಾಗಿದ್ದ ಶಿವಾಜಿನಗರ ಇಂದು ಸ್ವಲ ಕಳೆಗಟ್ಟಿದೆ.
ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು ಬಿಜೆಪಿ ಅಭ್ಯರ್ಥಿ ಎಂ. ಶರವಣ ಪರ ಸಚಿವ ಸಿಟಿ ರವಿ ಹಾಗೂ ರವಿ ಸುಬ್ರಹ್ಮಣ್ಯ ರೋಡ್ ಶೋ ಮಾಡುವ ಮೂಲಕ ಭರ್ಜರಿ ಪ್ರಚಾರ ಮಾಡಿದರು. ಹೊದಲೆಲ್ಲಾ ಬಿಜೆಪಿ ಅಭ್ಯರ್ಥಿ ಶರವಣಗೆ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ದಿನದಿಂದ ದಿನಕ್ಕೆ ಬಿಜೆಪಿ ಅಭ್ಯರ್ಥಿ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಕೂಡ ಇಂದು ಸಾವಿರಾರು ಬೆಂಬಲಿಗರ ಜೊತೆ ವಸಂತನಗರ, ಸಂಪಗಿರಾಮನಗರದಲ್ಲಿ ಭರ್ಜರಿ ಪ್ರಚಾರ ಮಾಡಿದರು. ನಂತರ ರಿಜ್ವಾನ್ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಪತ್ನಿ ಟಬು ವಸಂತ ನಗರದಲ್ಲಿ ಮನೆ ಮನೆಗೆ ತೆರೆಳಿ ಮತಯಾಚನೆ ಮಾಡಿದರು.
ಇನ್ನು ನಾನೇನು ಕಮ್ಮಿ ಇಲ್ಲ ಎನ್ನುವಂತೆ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದುಲ್ಲಾ ಸ್ಥಳೀಯ ನಾಯಕರ ಜೊತೆ ಸಂಪಗಿರಾಮ ನಗರ ಹಾಗೂ ಜಯಮಹಲ್ ವಾರ್ಡ್ನ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ ಇಂದು ಶಿವಾಜಿನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ಇಂದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಪ್ರಚಾರ ಮಾಡಲು ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಶಿವಾಜಿನಗರಕ್ಕೆ ಎಂಟ್ರಿಕೊಡಲಿದ್ದು, ಶಿವಾಜಿ ನಗರದಲ್ಲಿ ಜೋಡೆತ್ತುಗಳ ಅರ್ಭಟ ಜೋರಾಗಿರಲಿದೆ.