ಬೆಂಗಳೂರು:ಮಂಗಳವಾರವೂ ಬೆಂಗಳೂರು ಶಾಸಕರಿಂದ ನಾಮಪತ್ರ ಸಲ್ಲಿಕೆ ಭರಾಟೆ ಹೆಚ್ಚಿತ್ತು. ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಕೆ ಮಾಡಿದರು. ಮತಭಿಕ್ಷೆಗಾಗಿ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳು ಕೋಟಿ ಕೋಟಿ ಆಸ್ತಿಯ ಒಡೆಯರೇ ಆಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಬೈರತಿ ಬಸವರಾಜ್ ಆಸ್ತಿ ಎಷ್ಟಿದೆ?:ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಒಟ್ಟು ಆಸ್ತಿ ಮೌಲ್ಯ 91 ಕೋಟಿ ರೂ. ಆಗಿದೆ. ಚರಾಸ್ತಿ 31.99 ಕೋಟಿ ರೂ., ಸ್ಥಿರಾಸ್ತಿ 58.99 ಕೋಟಿ ರೂ. ಇದೆ. ಒಟ್ಟು 23.18 ಕೋಟಿ ರೂ. ಸಾಲ ಮಾಡಿದ್ದಾರೆ. ಐಷಾರಾಮಿ 3 ಬೆನ್ಜ್ ಕಾರು, 1 ಆಡಿ ಕಾರು, 2 ಟೊಯೋಟಾ ಕಾರಿನ ಒಡೆಯರಾಗಿರುವ ಬೈರತಿ ಬಸವರಾಜ್ ಬಳಿ 4 ರಾಡೋ ವಾಚ್, 4 ರೋಲೆಕ್ಸ್ ವಾಚ್ ಇದೆ. ಒಟ್ಟು 3.60 ಕೋಟಿ ಚಿನ್ನಾಭರಣದ ಒಡೆಯ. ಅವರ ಪತ್ನಿ ಹೆಸರಲ್ಲಿ ಒಟ್ಟು 26.2 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಪತ್ನಿ ಹೆಸರಲ್ಲಿ ಎರಡು ಕಾರಿದ್ದರೆ, ಯಾವುದೇ ಚಿನ್ನಾಭರಣ ಇಲ್ಲ. ಕುಟುಂಬದ ಒಟ್ಟು ಆಸ್ತಿ ಮೌಲ್ಯ 5.37 ಕೋಟಿ ರೂ. ಆಗಿದೆ.
ಮಂಜುಳಾ ಎಸ್. ಆಸ್ತಿ ವಿವರ: ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಎಸ್ ಆಸ್ತಿ ಒಟ್ಟು ಮೌಲ್ಯ 37.07 ಕೋಟಿ ರೂ. ಆಗಿದೆ. ಆ ಪೈಕಿ ಚರಾಸ್ತಿ 12.11 ಕೋಟಿ ರೂ., ಸ್ಥಿರಾಸ್ತಿ 24.96 ಕೋಟಿ ರೂ. ಇದೆ. ಒಟ್ಟು 9.99 ಕೋಟಿ ರೂ. ಸಾಲ ಮಾಡಿದ್ದಾರೆ. ಇವರ ಹೆಸರಲ್ಲಿ 1.03 ಕೋಟಿ ರೂ. ಮೌಲ್ಯದ 1 ಮರ್ಸಿಡಿಸ್ ಬೆನ್ಜ್ ಕಾರು ಇದೆ. ಒಟ್ಟು 33.60 ಲಕ್ಷ ರೂ. ಮೌಲ್ಯದ ಬಂಗಾರ ಹೊಂದಿದ್ದಾರೆ. ಪತಿ ಅರವಿಂದ ಲಿಂಬಾವಳಿ ಆಸ್ತಿ ಮೌಲ್ಯ 11.08 ಕೋಟಿ ರೂ. ಆಗಿದ್ದು, ಅವರು ಮಾಡಿರುವ ಸಾಲದ ಮೊತ್ತ 4.3 ಕೋಟಿ ರೂ. ಇನ್ನು ರೇಣುಕಾ ಲಿಂಬಾವಳಿ ಹೆಸರಲ್ಲಿ ಒಟ್ಟು 4.84 ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ಸುರೇಶ್ ಕುಮಾರ್ ಆಸ್ತಿ ವಿವರ :ರಾಜಾಜಿನಗರ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಒಟ್ಟು ಆಸ್ತಿ ಮೌಲ್ಯ 38.57 ಲಕ್ಷ ರೂ. ಆಗಿದೆ. ಆದರೆ ಯಾವುದೇ ಸ್ಥಿರ ಆಸ್ತಿ ಆಗಲೀ, ಯಾವುದೇ ಬಂಗಾರ ಹೊಂದಿಲ್ಲ. ಯಾವುದೇ ಸಾಲವನ್ನೂ ಮಾಡಿಲ್ಲ. ಪತ್ನಿ ಹೆಸರಲ್ಲಿ 39.62 ಚರಾಸ್ತಿ ಇದೆ. ಅವರ ಬಳಿಯೂ ಯಾವುದೇ ಬಂಗಾರ ಇಲ್ಲ, ಸಾಲ ಇಲ್ಲ. ತಾಯಿ ಸುಶೀಲಮ್ಮ ಹೆಸರಲ್ಲಿ 3.95 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ಉಮೇಶ್ ಶೆಟ್ಟಿ ಆಸ್ತಿ ಎಷ್ಟಿದೆ ಗೊತ್ತಾ?:ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಒಟ್ಟು ಆಸ್ತಿ ಮೌಲ್ಯ 19.9 ಕೋಟಿ ರೂ. ಆಗಿದೆ. ಒಟ್ಟು 9.98 ಕೋಟಿ ರೂ. ಮೊತ್ತದ ಸಾಲ ಮಾಡಿದ್ದಾರೆ. 80 ಲಕ್ಷ ಮೊತ್ತದ ಮರ್ಸಿಡಿಸ್ ಬೆನ್ಜ್ ಕಾರು ಹೊಂದಿದ್ದಾರೆ. ಇನ್ನು ಪತ್ನಿ ಹೆಸರಲ್ಲಿ ಒಟ್ಟು 10.48 ಕೋಟಿ ರೂ. ಆಸ್ತಿ ಇದೆ. ಅವರು 1.74 ಕೋಟಿ ರೂ. ಸಾಲ ಮಾಡಿದ್ದಾರೆ.